- ಹೊನ್ನಾಳಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಸೂಚನೆ
- ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಎಲ್ಲರೂ ಪಾಲಿಸಬೇಕು
- ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರು, ವರ್ತಕರಲ್ಲಿ ಜಾಗೃತಿ- - -
ಘನತ್ಯಾಜ್ಯ ನಿರ್ವಹಣಾ ನಿಯಮ- 2026ರಂತೆ ಇನ್ನು ಮುಂದೆ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಹೋಟೆಲ್ ಮಾಲೀಕರು, ವಾಣಿಜ್ಯ ಉದ್ದಿಮೆದಾರರು, ಬೀದಿಬದಿ ವ್ಯಾಪಾರಸ್ಥರು ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ 4 ವಿಧದ ತ್ಯಾಜ್ಯಗಳಾದ ಹಸಿತ್ಯಾಜ್ಯ, ಒಣತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಅಥವಾ ಅಪಾಯಕಾರಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕ್ರಮಬದ್ದವಾಗಿ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ತಿಳಿಸಿದರು.
ಆದರೆ, ಹಲವಾರು ಜನ ಖಾಲಿ ನಿವೇಶನ, ಚರಂಡಿಗಳು, ರಸ್ತೆ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಇಡೀ ನಗರದ ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ. ಇದು ಪುರಸಭೆ ಗಮನಕ್ಕೆ ಬಂದಿದೆ. ಜನರು ತಮ್ಮ, ಕಚೇರಿ, ಅಂಗಡಿಗಳಿಂದ ಪ್ರತಿನಿತ್ಯ ಉತ್ಪತ್ತಿಯಾಗುವ 4 ವಿಧದ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ತಪ್ಪದೇ ನಿತ್ಯ ಬೆಳಗ್ಗೆ ಪುರಸಭೆಯಿಂದ ಬರುವ ಕಸ ಸಂಗ್ರಹ ವಾಹನಗಳಿಗೆ ಕಡ್ಡಾಯವಾಗಿ ನೀಡಬೇಕು ಎಂದರು.
ವ್ಯಾಪಾರಸ್ಥರು ವ್ಯಾಪಾರದ ಸ್ಥಳದಲ್ಲಿ ಗ್ರಾಹಕರು ಎಸೆದುಹೋದ ಟೀ ಲೋಟ, ತಂಬಾಕು ಚೀಟಿ, ಹಣ್ಣಿನ ಸಿಪ್ಪೆಗಳನ್ನು ರಸ್ತೆಯಲ್ಲಿ ಎಸೆಯದೇ ನಿಗದಿಪಡಿಸಿದ ಬುಟ್ಟಿಗಳಲ್ಲಿ ಹಾಕುವಂತೆ ಕ್ರಮಕೈಗೊಳ್ಳಬೇಕು. ಈ ಮೂಲಕ ನಗರದ ಸ್ವಚ್ಛತೆಗೆ ಸಾರ್ವಜನಿಕರ ಆರೋಗ್ಯ ರಕ್ಷಣೆ, ಉತ್ತಮ ಜೀವನಕ್ಕೆ ಮತ್ತು ಸರ್ಕಾರದ ಆದೇಶಗಳನ್ನು ಅನುಷ್ಠಾನಗೊಳಿಸಲು ಪುರಸಭೆ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
-8ಎಚ್.ಎಲ್.ಐ1: