ಕನ್ನಡಪ್ರಭ ವಾರ್ತೆ ಬೆಂಗಳೂರು ಕೋಟಾ
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತಿದ್ದು, ಕಾರವಾರ ತಾಲೂಕಿನ ಕಡವಾಡ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹಾಗೂ ಸುಮಾರು ಆರು ದಶಕಗಳ ಸುದೀರ್ಘ ಇತಿಹಾಸ ಹೊಂದಿದ್ದ ಹಳೆಯ ಸೇತುವೆ ಸೋಮವಾರ ರಾತ್ರಿ ಸುರಿದ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಸಿಲುಕಿ ಕುಸಿದು ಬಿದ್ದಿದೆ. ಈ ಮಧ್ಯೆ, ಬೇಡ್ತಿ ಕಣಿವೆ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಲ್ಲಾಪುರ ತಾಲೂಕಿನ ಮಾಗೋಡ ಜಲಪಾತ ಮೈದುಂಬಿಕೊಳ್ಳುತ್ತಿದೆ. ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಭಟ್ಕಳದ ತಾಲೂಕು ಆಸ್ಪತ್ರೆಯೊಳಗೆ ನೆರೆಯ ನೀರು ನುಗ್ಗಿದ್ದು, ರೋಗಿಗಳು ಪರದಾಡುವಂತಾಗಿದೆ. ಗೋಕರ್ಣದ ದೇವಸ್ಥಾನ ಸಮೀಪದ ರಸ್ತೆ ಜಲಾವೃತವಾಗಿದ್ದು, ಆತ್ಮಲಿಂಗ ದರ್ಶನಕ್ಕೆ ಕೊಂಚ ಅಡೆತಡೆಯಾಗಿದೆ.
ಯಾದಗಿರಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಹುಣಸಗಿ ತಾಲೂಕಿನ ಅಮಲಿಹಾಳದಲ್ಲಿ ಗಲ್ಲಿಗಳು ಜಲದಿಗ್ಭಂಧನಕ್ಕೆ ಒಳಗಾಗಿವೆ. ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ 12 ಅಡಿ ಎತ್ತರದ ಕಾಂಪೌಂಡ್ ಕುಸಿದಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಕಾರು ನುಜ್ಜುಗುಜ್ಜಾಗಿದೆ. ಕಲ್ಮಠ ಓಣಿಯಲ್ಲಿರುವ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 10ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಇದರಿಂದಾಗಿ ನಿವಾಸಿಗಳು ಬೀದಿಪಾಲಾಗಿದ್ದಾರೆ. 7 ಕಾಂಪ್ಲೆಕ್ಸ್‌ಗಳಿಗೆ ನೆರೆಯ ನೀರು ನುಗ್ಗಿದೆ. ತಾಲೂಕಿನ ಗರಜೂರ-ಸಂಗೋಳ್ಳಿ ಸಂಪರ್ಕ ಸೇತುವೆ ಜಲಾವೃತವಾಗಿದೆ.ಇದೇ ವೇಳೆ, ರಾಜಧಾನಿ ಬೆಂಗಳೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ.