ಕಳೆದ 4 ತಿಂಗಳಿಂದ ಹನಿ ನೀರಿಗೂ ಪರದಾಡುತ್ತಿರುವ ತಾಲೂಕಿನ ಮರೇನಹಳ್ಳಿ ಗ್ರಾಮಸ್ಥರ ಆಕ್ರೋಶ ಸೋಮವಾರ ಸ್ಫೋಟಗೊಂಡಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ದೊಣೆಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು, ಸ್ಥಳಕ್ಕೆ ಭೇಟಿ ನೀಡಿದ್ದ ತಾಪಂ ಇಒ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಬರೋಬ್ಬರಿ 2 ಗಂಟೆ ಕಾಲ ದಿಗ್ಬಂಧನದಲ್ಲಿರಿಸಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

೨ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹಾಗೂ ನೂರಾರು ಜಾನುವಾರುಗಳಿರುವ ಈ ಗ್ರಾಮದ ಮೂರು ಬೋರ್‌ವೆಲ್‌ಗಳು ಸಂಪೂರ್ಣ ಬತ್ತಿಹೋಗಿವೆ. ಟ್ಯಾಂಕರ್ ನೀರು ಸಮರ್ಪಕವಾಗಿ ತಲುಪದ ಕಾರಣ, ಮಹಿಳೆಯರು ನಿತ್ಯ ಮೈಲಿಗಟ್ಟಲೆ ಅಲೆದಾಡುವಂತಾಗಿದೆ. ಗ್ರಾಮಸ್ಥರು ಅನಿವಾರ್ಯವಾಗಿ ಪಕ್ಕದ ಜಮ್ಮಾಪುರ ಹಾಗೂ ಜಗಳೂರಿಗೆ ತೆರಳಿ ನೀರು ತರುತ್ತಿದ್ದಾರೆ. ಅಧಿಕಾರಿಗಳ ನಿರಂತರ ನಿರ್ಲಕ್ಷ್ಯದಿಂದ ಬೇಸತ್ತ ಸಾರ್ವಜನಿಕರು ತಾಪಂ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಾಪಂ ಇಒ ಕೆಂಚಪ್ಪ, ಕುಡಿಯುವ ನೀರು ಇಲಾಖೆಯ ಎಇಇ ಸಾದೀಕ್ ಉಲ್ಲಾ, ಪಿಡಿಒ ಕೊಟ್ರೇಶ್ ಹಾಗೂ ಬಿಲ್ ಕಲೆಕ್ಟರ್ ಮಹಬೂಬ್ ಅವರನ್ನು ನೂರಾರು ಮಹಿಳೆಯರು ಮತ್ತು ಪುರುಷರು ಸುತ್ತುವರೆದು ತರಾಟೆಗೆ ತೆಗೆದುಕೊಂಡರು. "ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ೬೦೦ಕ್ಕೂ ಹೆಚ್ಚು ಕುಟುಂಬಗಳಿದ್ದು, ಎಲ್ಲರೂ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪಿಡಿಒ ಗಮನಕ್ಕೆ ತಂದರೂ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ " ಎಂದು ರೈತ ಸಂಘದ ತಾಲೂಕು ಉಪಾಧ್ಯಕ್ಷ ಬಿ.ಎನ್. ಓಬಳೇಶ್ ದೂರಿದರು.
ವಕೀಲರ ಸಂಘದ ಅಧ್ಯಕ್ಷ ಟಿ. ಬಸವರಾಜ್ ಮಾತನಾಡಿ, ಮರೇನಹಳ್ಳಿಯು ಜಗಳೂರು ಪಟ್ಟಣಕ್ಕೆ ಹತ್ತಿರವಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಪ್ರತಿ ವರ್ಷವೂ ಇಲ್ಲಿ ಇದೇ ಸಮಸ್ಯೆ ಮರುಕಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಪ್ರಮುಖರಾದ ಪಿ.ಎನ್. ನಾಗರಾಜ್, ಕೆ.ಟಿ. ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ದೊರೆಸ್ವಾಮಿ, ಇಮಾಂ ಸಾಬ್, ಸುಶೀಲಮ್ಮ, ರತ್ನಮ್ಮ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
- - -
-08ಜೆಜಿಎಲ್1: ಮರೇನಹಳ್ಳಿಯಲ್ಲಿ ಕುಡಿಯುವ ನೀರಿನ ಹಾಹಾಕಾರ ಖಂಡಿಸಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಗ್ರಾಮಸ್ಥರು ಪ್ರತಿಭಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.