ಹಾವೇರಿ: ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕಾಗಿ ಉತ್ತರ ಕರ್ನಾಟಕದ ಜನರು ಒಗ್ಗಟ್ಟಿನ ಹೋರಾಟ ರೂಪಿಸಬೇಕು. ಸರ್ಕಾರಗಳು ಬದಲಾಗಬಹುದು. ಆದರೆ ನೀರಿಗಾಗಿ ನಡೆಯುವ ಹೋರಾಟದ ಸಂಕಲ್ಪ ಬದಲಾಗಬಾರದು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಯೋಜನೆ ಸಾಕಾರಕ್ಕೆ ರೈತರು, ಮಠಾಧೀಶರು, ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸಂಘಟಿತರಾಗುವ ಅಗತ್ಯವಿದೆ. ಹಾವೇರಿ ಜಿಲ್ಲೆಯ ಜನಶಕ್ತಿಯ ಪ್ರದರ್ಶನ ಇಡೀ ದೇಶದ ಗಮನ ಸೆಳೆಯುವಂತಿರಬೇಕು. ಯಾವುದೇ ಬೃಹತ್ ಯೋಜನೆ ಸುಲಭವಾಗಿ ಜಾರಿಯಾಗುವುದಿಲ್ಲ. ಹಲವು ಹಂತಗಳ ತಾಂತ್ರಿಕ ಹಾಗೂ ಆಡಳಿತಾತ್ಮಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿರಂತರ ಪ್ರಯತ್ನ ಮತ್ತು ಜನರ ಒತ್ತಡದಿಂದ ಅಸಾಧ್ಯವೆನಿಸಿದ್ದನ್ನೂ ಸಾಧ್ಯವಾಗಿಸಬಹುದು. ಹೀಗಾಗಿ ಈ ಯೋಜನೆಯ ವಿಚಾರದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಟ ಮುಂದುವರಿಸಬೇಕು ಎಂದರು.
ಡಿಪಿಆರ್‌ನಿಂದ ಆತಂಕಗಳಿಗೆ ಉತ್ತರ: ಹಿಂದಿನ ಯೋಜನೆಯ ರೂಪುರೇಷೆಗೂ ಈಗಿನ ಪ್ರಸ್ತಾವನೆಗೂ ಸಾಕಷ್ಟು ವ್ಯತ್ಯಾಸವಿದೆ. ಪ್ರಸ್ತುತ ಯೋಜನೆಯಿಂದ ದೊಡ್ಡ ಪ್ರಮಾಣದ ಮುಳುಗಡೆಯಾಗುವುದಿಲ್ಲ. 700 ಹೆಕ್ಟೇರ್ ನದಿ ಪಾತ್ರದ ಪ್ರದೇಶ ಮಾತ್ರ ಯೋಜನೆಗೆ ಒಳಪಡಲಿದೆ. ಇಡೀ ನದಿಯನ್ನೇ ಬೇರೆಡೆಗೆ ತಿರುಗಿಸಲಾಗುತ್ತದೆ ಎಂಬ ಆತಂಕ ಸರಿಯಲ್ಲ. ಡಿಪಿಆರ್ ಪೂರ್ಣಗೊಂಡ ಬಳಿಕವಷ್ಟೇ ಯೋಜನೆಯ ನೈಜ ಸ್ವರೂಪ ಮತ್ತು ಸಾಧಕ-ಬಾಧಕಗಳ ಸ್ಪಷ್ಟ ಚಿತ್ರಣ ಸಿಗಲಿದೆ. ಈ ವರದಿಯೇ ಮುಂದಿನ ಹೋರಾಟಕ್ಕೆ ಆಧಾರವಾಗಲಿದೆ ಎಂದರು.ಸರ್ವೆ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬುದು ಅಧಿಕಾರಿಗಳ ಅಳಲು. ಹೀಗಾಗಿ ಡ್ರೋನ್ ಮೂಲಕ ಸರ್ವೆ ನಡೆಸುವಂತೆ ಸೂಚಿಸಲಾಗಿದೆ. ಯೋಜನೆಗೆ ಎಂಒಯು ಸಹಿ ಹಾಕಲಾಗಿದ್ದು, ಅದಕ್ಕೆ ಬದ್ಧವಾಗಿರುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಹಾವೇರಿ ಜಿಲ್ಲೆಗೆ ಪ್ರತ್ಯೇಕ ನೀರಿನ ಪಾಲು ದೊರೆಯುವಂತೆಯೂ ಪ್ರಯತ್ನಿಸಲಾಗುತ್ತಿದೆ ಎಂದರು.
ಜನಶಕ್ತಿ ಪ್ರದರ್ಶನವಾಗಲಿ: ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಯೋಜನೆಯಿಂದ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಯೋಜನೆ ವಿರೋಧಿಸುವವರು ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಬೇಡ್ತಿ-ವರದಾ ಯೋಜನೆಯಡಿ 128 ಹಳ್ಳಿಗಳು ಪ್ರಸ್ತಾಪದಲ್ಲಿವೆ. ಪಟ್ಟಣದ ಹೊಳೆ, ಶಾಲ್ಮಲಾ ಹಾಗೂ ಸೂರೆಮನೆ ಬಳಿಯಿಂದ ನೀರು ಪಂಪ್ ಮಾಡಿ ಹಿರೇವಡ್ಡಟ್ಟಿ ಬ್ಯಾರೇಜ್ ನಿರ್ಮಿಸುವ ಸಾಧ್ಯತೆಯಿದೆ. 18 ಟಿಎಂಸಿ ನೀರು ಪಡೆಯುವ ಅವಕಾಶವಿರುವಾಗ ಸುಮ್ಮನಿರಲು ಸಾಧ್ಯವೇ? ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿ ಹೋರಾಟಕ್ಕೆ ಮುಂದಾಗಬೇಕು ಎಂದರು.
ಶಿರಸಿಗೆ 100 ಮಠಾಧೀಶರ ನಿಯೋಗ..
ಹಾವೇರಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ರೈತರು ಮಳೆ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಈ ಭಾಗಕ್ಕೆ ಬೇಡ್ತಿ-ವರದಾ ಯೋಜನೆ ಅವಶ್ಯಕ. ಜನಪ್ರತಿನಿಧಿಗಳು, ರೈತರು ಹಾಗೂ ಮಠಾಧೀಶರು ಪಕ್ಷಾತೀತವಾಗಿ ಒಗ್ಗೂಡಿ ಹೋರಾಟ ನಡೆಸಬೇಕು ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದ್ದಾರೆ.
ಯು.ಬಿ. ಬಣಕಾರ ತಿಳಿಸಿದ್ದಾರೆ.