ದುಗ್ಗಳ ಸದಾನಂದ, ನಾಪೋಕ್ಲು ಕೊಡಗು ದಕ್ಷಿಣದ ಕಾಶ್ಮೀರವೆಂಬ ಹೆಗ್ಗಳಿಕೆಯೊಂದಿಗೆ ಹಸಿರ ಸಿರಿ ಉಟ್ಟಿರುವುದು ಮಾತ್ರವಲ್ಲ, ಐತಿಹಾಸಿಕವಾಗಿಯೂ ಸಾಕಷ್ಟು ತಾಣಗಳಿಗೆ ಒಡಲಾಗಿದೆ.
ದೊಡ್ಡ ವೀರರಾಜೇಂದ್ರ ಮಹಾದೇವಮ್ಮಾಜಿಯನ್ನು ವಿವಾಹವಾದ ವಿವಾಹ ಮಂಟಪವೂ ಅರಮನೆಯ ಮುಂಭಾಗದಲ್ಲಿದೆ. ಎರಡು ಶತಮಾನಗಳಷ್ಟು ಪ್ರಾಚೀನ ಇತಿಹಾಸ ಹೊಂದಿರುವ ಈ ಅರಮನೆ ತನ್ನ ಅಪೂರ್ವ ವಾಸ್ತುವಿನ್ಯಾಸ, ಚಿತ್ರಕಲಾ ವೈಭವದಿಂದ ಮನಸೆಳೆಯುತ್ತಿದ್ದು, ಕೊಡಗಿನ ಪ್ರವಾಸಿತಾಣಗಳಲ್ಲಿ ಒಂದೆನಿಸಿದೆ. ಈ ಅರಮನೆ ಮಡಿಕೇರಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿದೆ. ಮರದಿಂದಲೇ ನಿರ್ಮಿತವಾಗಿರುವ ಅರಮನೆಗೆ ಐತಿಹಾಸಿಕ ಮಹತ್ವವಿದೆ. ಅರಮನೆಯಲ್ಲಿ 14 ಚಿಕ್ಕ ಕೋಣೆಗಳಿದೆ. ಹಿಂಭಾಗದಲ್ಲಿ ಅಪರಾಧಿಗಳನ್ನಿಡುತ್ತಿದ್ದ 4 ಕತ್ತಲೆ ಕೋಣೆಗಳಿದೆ. ಎರಡು ಪರವೇಶದ್ವಾರ ಹೊಂದಿರುವ ಎರಡಂತಸ್ತಿನ ಅರಮನೆಯಲ್ಲಿ ಸುಂದರ ಕೆತ್ತನೆಯಿದೆ. ಇದರ ವರ್ಣಲೇಪಿತ ಛಾವಣಿಯೂ ಮರದಿಂದ ನಿರ್ಮಾಣ ಮಾಡಲಾಗಿದೆ. ಕಂಬದ ಅರಮನೆಯ ಮುಂಭಾಗದ ಮಂಟಪ ವಿವಾಹ ಮಂಟಪವೂ ಹೌದು.
ಇಗ್ಗುತ್ತಪ್ಪ ದೇವಾಲಯ: ಕೊಡಗಿನ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ಕೂಡ ಪ್ರಮುಖ. ಇಗ್ಗುತ್ತಪ್ಪ ದೇವರನ್ನು ಮಳೆ ದೈವ ಎಂದು ಕರೆಯಲಾಗುತ್ತದೆ. ಮಡಿಕೇರಿ ತಾಲೂಕಿನ ಕಕ್ಕಬ್ಬೆಯಿಂದ ಸುಮಾರು 3 ಕಿ.ಮೀ. ದೂರ ಸಾಗಿದರೆ ನಿಸರ್ಗದ ಚೆಲುವಿನಲ್ಲಿ ಕಂಗೊಳಿಸುವ ಇಗ್ಗುತ್ತಪ್ಪ ದೇವಾಲಯವನ್ನು ಸೇರಬಹುದು. ಸುತ್ತಲಿನ ನಿಸರ್ಗ ವೈಭವ ಹಿನ್ನೋಟಕ್ಕೆ ರಮಣೀಯ ತಡಿಯಂಡಮೋಳ್ ಪರ್ವತ ಸಾಲುಗಳು ಮನಕ್ಕೆ ಮುದ ನೀಡುತ್ತವೆ. ಅಂತೆಯೇ ಗುಡ್ಡದ ತುದಿಯಲ್ಲಿನ ಇಗ್ಗುತ್ತಪ್ಪನ ಪವಿತ್ರ ಸನ್ನಿ ಭಾವುಕರಿಗೆ ಭಕ್ತಿಯ ನೆಲೆಯಾಗಿ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.ಎಮ್ಮೆಮಾಡು ದರ್ಗಾ: ಎಮ್ಮೆಮಾಡು ಸೂಫಿ ಸಂತರ ದಿವ್ಯ ಸಾನ್ನಿಧ್ಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಸೂಫಿ ಶಹೀದ್ ಎಂಬ ಹೆಸರಿನ ದೈವಭಕ್ತ, ಪವಾಡ ಪುರುಷರೊಬ್ಬರು ಸಮಾಧಿ ಹೊಂದಿ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಸಂತರ ಹೆಸರಿನಲ್ಲಿ ವರ್ಷಂಪ್ರತಿ ಉರೂಸ್ ಹಬ್ಬ ನಡೆಯುತ್ತದೆ. ಇಲ್ಲಿ ಸೂಫಿ ಶಹೀದ್ ಅವರ ಹೆಸರಿನಲ್ಲಿ ಶಹೀದಿಯ ಅನಾಥ ಮತ್ತು ಬಡ ಮಕ್ಕಳ ವಸತಿ ಗೃಹ ಕಾರ್ಯಾಚರಿಸುತ್ತಿದೆ. ಜಿಲ್ಲೆಯಲ್ಲೇ ಅತ್ಯಾಧುನಿಕವೆನಿಸಿದ ಸಾವಿರಾರು ಮಂದಿ ಏಕಕಾಲಕ್ಕೆ ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸಲು ಅನುಕೂಲಕರವಾದ ಸುಂದರ ಮಸೀದಿ ಇಲ್ಲಿದ್ದು, ಇದನ್ನು ಅಂದಾಜು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಇಲ್ಲಿ ಫೆಬ್ರವ-ಮಾರ್ಚ್ ತಿಂಗಳಲ್ಲಿ ಉರೂಸ್ ಸಮಾರಂಭ ಜರುಗುತ್ತದೆ.