ಬ್ಯಾಹಟ್ಟಿ:
ಶುಕ್ರವಾರ ಬ್ಯಾಹಟ್ಟಿಯಿಂದ ಹೆಬಸೂರು, ಕರ್ಲವಾಡ ಮಾರ್ಗವಾಗಿ ಯಮನೂರಿಗೆ ತೆರಳಿ ವಾಸ್ತವ್ಯ ಹೂಡಿದ್ದ ರೈತರು, ಬಳಿಕ ಶನಿವಾರ ಪಾದಯಾತ್ರೆ ಮುಂದುವರಿಸಿ ನವಲಗುಂದ ತಲುಪಿದರು. ರೈತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕುಗಳನ್ನು ಶೀಘ್ರವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ನೀಡಬೇಕು. ಬಾಕಿ ಇರುವ ಬೆಳೆ ವಿಮೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ರೈತರ ಬೆಳೆ ಸಾಲ ಹಾಗೂ ಟ್ರ್ಯಾಕ್ಟರ್ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸರ್ಕಾರದ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ 2025-26ನೇ ಸಾಲಿನ ಬಾಕಿ ಇರುವ 95 ರೈತರಿಗೆ ಸೇರಬೇಕಾದ ಸುಮಾರು ₹87 ಲಕ್ಷ ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಇದರೊಂದಿಗೆ ಜಾನುವಾರುಗಳಿಗೆ ಅಗತ್ಯ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.