ಹಾನಗಲ್ಲ: ಯಾರದೋ ತೇಜೋವಧೆಯಿಂದ ನಮ್ಮ ಅಭಿವೃದ್ಧಿ ಸಾಧ್ಯವಿಲ್ಲ, ಮಾನಸಿಕ ಬೌದ್ಧಿಕವಾಗಿ ಮಹಿಳೆ ಸಕಾರಾತ್ಮಕ ಚಿಂತನೆ ಮೂಲಕ ಬೆಳೆದು ಬೆಳಗಬೇಕು ಎಂದು ನ್ಯಾಯವಾದಿ ವೀಣಾ ಬ್ಯಾತನಾಳ ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಕ್ಷಕಿ ಎಸ್. ವಿನುತಾ, ೧೨ನೇ ಶತಮಾನದ ಶರಣರು ಭವಿಷ್ಯದ ಈ ಜಗದ ಆತಂಕಗಳನ್ನು ಅರಿತು ಅಂಕು ಡೊಂಕು ತಿದ್ದಲು ವಚನಗಳ ಮೂಲಕ ಪ್ರೇರಣೆ ಆದರು. ಮಹಿಳಾ ಸ್ವಾತಂತ್ರ್ಯಕ್ಕಾಗಿ ಅಂದೇ ಕ್ರಾಂತಿ ಮಾಡಿದರು. ಹೆಣ್ಣಿನ ಬಗೆಗೆ ಕನಿಕರ, ಮಮತೆಗಿಂತಲೂ ನೋವು ಸಂಕಟ ಕೊಡದಂತೆ ಹೆಣ್ಣನ್ನು ಕಾಣುವುದೇ ಒಳ್ಳೆಯ ಸಮಾಜದ ಮೌಲ್ಯದ ಮೊತ್ತ. ಈಗ ಮಹಿಳಾ ಸ್ವಾತಂತ್ರ್ಯದ ಉತ್ಥಾನ ಕಾಲದಲ್ಲಿದ್ದೇವೆ. ಇದರ ಸದುಪಯೋಗ ಆಗಬೇಕೇ ಹೊರತು ದುರುಪಯೋಗ ಸಲ್ಲದು. ಭಾರತೀಯ ಇತಿಹಾಸದಲ್ಲಿ ಹೆಣ್ಣಿಗೆ ಇರುವ ನಿಜವಾದ ಗೌರವವನ್ನು ಗಮನಿಸಿದರೆ ನಾವು ಹೆಣ್ಣಾಗಿ ಹುಟ್ಟಿದ್ದೇ ಒಂದು ದೊಡ್ಡ ಸಾರ್ಥಕ್ಯ ಎಂದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಇಂದು ತಂತ್ರಜ್ಞಾನದ ಯುಗದಲ್ಲಿರುವ ಮಹಿಳೆಗೆ ಸಾಂಸ್ಕೃತಿಕ ಸಾಮಾಜಿಕ ಆರ್ಥಿಕ ಅವಕಾಶಗಳು ಸಾಕಷ್ಟಿವೆ ಅವುಗಳ ಸದುಪಯೋಗ ಆಗಬೇಕು. ಮಹಿಳೆ ಅಬಲೆ ಅಲ್ಲ ಎಂಬುದು ಸಾಬೀತಾಗಿದೆ. ಅಂತಹ ದಿಟ್ಟತನ ನಮ್ಮ ನಡುವಳಿಕೆಗಳಲ್ಲಿ ಬೇಕು ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಪ್ರಾಸ್ತಾವಿಕ ಮಾತನಾಡಿದರು. ಶಸಾಪ ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಅಧ್ಯಕ್ಷ ಪ್ರೊ.ಸಿ.ಮಂಜುನಾಥ, ತಾಲೂಕು ಘಟಕದ ಅಧ್ಯಕ್ಷ ಎಸ್.ಸಿ.ಕಲ್ಲನಗೌಡರ, ಅಕ್ಕಮ್ಮ ಶೆಟ್ಟರ, ರೇಖಾ ಶೆಟ್ಟರ, ಎಂ.ಎಸ್.ಹುಲ್ಲೂರ, ಅಶೋಕ ದಾಸರ, ಮಲ್ಲಿಕಾರ್ಜುನ ಅಮರದ, ಕಮಲಾಕ್ಷಿ ಕೊಂಡೋಜಿ, ವೇದಿಕೆಯಲ್ಲಿದ್ದರು.
ಎಚ್.ಸುಧಾ, ಲಕ್ಷ್ಮೀ ಸಿಂಧೂರ ಪ್ರಾರ್ಥನೆ ಹಾಡಿದರು, ತಾಲೂಕು ಕಾರ್ಯದರ್ಶಿ ಸುಭಾಸ ಹೊಸಮನಿ ಸ್ವಾಗತಿಸಿದರು. ಬಿ.ಅರ್.ಪಾಟೀಲ ವಚನ ಗಾಯನ ಮಾಡಿದರು. ಪ್ರವೀಣ ಬ್ಯಾತನಾಳ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಉಪಾಧ್ಯಕ್ಷ ಅಶೋಕ ದಾಸರ ವಂದಿಸಿದರು.