ಸಿದ್ದಿ ಸಮುದಾಯದವರು ಪ್ರಕೃತಿ ಪೂಜಕರು: ಶಾಂತಾರಾಮ ಸಿದ್ದಿ

KannadaprabhaNewsNetwork |  
Published : Mar 13, 2024, 02:02 AM IST
ಫೋಟೋ ಮಾ.೧೨ ವೈ.ಎಲ್.ಪಿ. ೦೭ | Kannada Prabha

ಸಾರಾಂಶ

ಸಮಾಜದಲ್ಲಿ ಹಿಂದುಳಿದಿರುವ ಯಾವುದೇ ಜನಾಂಗದ ಅಧ್ಯಯನ ಕೇವಲ ಪದವಿ ಗಳಿಕೆಗೆ ಮಾತ್ರ ಸೀಮಿತವಾಗದೇ, ಸಮುದಾಯದ ಹಿತಚಿಂತನೆಯ ಗುರಿ ಆಗಿರಬೇಕು.

ಯಲ್ಲಾಪುರ: ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಮುಗ್ಧ ಸಿದ್ದಿ ಸಮುದಾಯದವರು ಸನಾತನಿಗಳಾದ ಪ್ರಕೃತಿ ಪೂಜಕರು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದರು.

ಮಾ. ೧೧ರಂದು ತಾಲೂಕಿನ ಹಿತ್ಲಳ್ಳಿ ಗ್ರಾಪಂ ಸಭಾಭವನದಲ್ಲಿ ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ೨೦೨೩- ೨೪ನೇ ಸಾಲಿನ ಸಮಾಜಕಾರ್ಯ ಬುಡಕಟ್ಟು ಶಿಬಿರದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಸಮಾಜದಲ್ಲಿ ಹಿಂದುಳಿದಿರುವ ಯಾವುದೇ ಜನಾಂಗದ ಅಧ್ಯಯನ ಕೇವಲ ಪದವಿ ಗಳಿಕೆಗೆ ಮಾತ್ರ ಸೀಮಿತವಾಗದೇ, ಸಮುದಾಯದ ಹಿತಚಿಂತನೆಯ ಗುರಿ ಆಗಿರಬೇಕು. ಅಲ್ಲದೇ, ಯಾವುದೇ ವಿವಿ ವಿದ್ಯಾರ್ಥಿಗಳು ಕೇವಲ ಒಂದೇ ಜನಾಂಗಕ್ಕೆ ಮೀಸಲಾದ ಅಧ್ಯಯನ ಪ್ರವೃತ್ತಿ ಕೈಗೊಳ್ಳದೇ, ವಿಶಾಲ ಮತ್ತು ವಿಸ್ತಾರ ಮನೋಭಾವ ಹೊಂದಿದವರಾಗಿರಬೇಕು ಎಂದರು.

ಶಿಬಿರವನ್ನು ಉದ್ಘಾಟಿಸಿದ ಹಿತ್ಲಳ್ಳಿ ಗ್ರಾಪಂ ಅಧ್ಯಕ್ಷ ಸತ್ಯನಾರಾಯಣ ಹೆಗಡೆ ಮಾತನಾಡಿ, ನಮ್ಮ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಪೂರಕ ರೀತಿಯಲ್ಲಿ ಈ ಶಿಬಿರ ನಡೆಯಲಿ. ಕಾರ್ಯಕ್ರಮಕ್ಕೆ ಗ್ರಾಪಂ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ.ಪ್ರೌ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ ಹೆಗಡೆ ಮಾತನಾಡಿ, ಹಿತ್ಲಳ್ಳಿಯಲ್ಲಿ ಇಂತಹ ೨ನೇ ಶಿಬಿರ ಉದ್ಘಾಟನೆಗೊಂಡಿದೆ. ಶಿಬಿರಾರ್ಥಿಗಳು ತಮ್ಮ ಆಶಯ ಮತ್ತು ಗುರಿಗಳ ಈಡೇರಿಕೆಯ ಸಂದರ್ಭದಲ್ಲಿ ಪಾಲಕರ ನಿರೀಕ್ಷೆಯನ್ನು ಹುಸಿ ಮಾಡದೇ, ಬದುಕು ರೂಪಿಸಿಕೊಳ್ಳಿ ಎಂದರು.

ಗ್ರಾಪಂ ಸದಸ್ಯ ಪ್ರಸನ್ನ ಭಟ್ಟ ಮಾತನಾಡಿ, ಬದಲಾದ ಕಾಲದಲ್ಲಿ ಸಿದ್ದಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ಸುಶಿಕ್ಷಿತರಾಗಿದ್ದು, ಅವರು ದೇಶದ ಅಮೂಲ್ಯ ಕೊಡುಗೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಮತ್ತೋರ್ವ ಗ್ರಾಪಂ ಸದಸ್ಯೆ ಸುಶೀಲಾ ಸಿದ್ದಿ, ಜನಪದ ಕಲಾವಿದೆ ಲಕ್ಷ್ಮೀ ಸಿದ್ದಿ ಮಾತನಾಡಿದರು. ಸಿದ್ದಿ ಸಮುದಾಯದ ಕಲಾವಿದರಾದ ಗೀತಾ ಸಿದ್ದಿ, ರಾಧಾ ಸಿದ್ದಿ, ಸಾಮಾಜಿಕ ಕಾರ್ಯಕರ್ತರಾದ ಬಾಲಚಂದ್ರ ಹೆಗಡೆ, ಮಹಾಬಲೇಶ್ವರ ಶಾನಭಾಗ ವೇದಿಕೆಯಲ್ಲಿದ್ದರು.

ವಿವಿಯ ೨೫ ವಿದ್ಯಾರ್ಥಿಗಳು(ಶಿಬಿರಾರ್ಥಿಗಳು) ಪಾಲ್ಗೊಂಡಿದ್ದ ಶಿಬಿರ ಜ್ಯೋತಿ ಮತ್ತು ಅಕ್ಷತಾರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ನಿಶಾ ಹಾದಿಮನಿ ಸ್ವಾಗತಿಸಿದರು. ಕುಮಾರ ನಿರ್ವಹಿಸಿದರು. ಶಿಬಿರದ ಸಹನಿರ್ದೇಶಕರೂ, ವಿವಿ ಉಪನ್ಯಾಸಕರೂ ಆದ ಗಣಪತಿ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು.

ಸಭಾಕಾರ್ಯಕ್ರಮದ ನಂತರ ಸ್ಥಳೀಯ ಸಿದ್ದಿ ಸಮುದಾಯದ ಮಹಿಳೆಯರು ಪ್ರಸ್ತುತಪಡಿಸಿದ ಪುಗಡಿ ನೃತ್ಯ ಆಕರ್ಷಕವಾಗಿತ್ತು. ಒಂದು ವಾರಗಳ ಕಾಲ ನಡೆಯಲಿರುವ ಶಿಬಿರದ ಸಮಾರೋಪ ಮಾ. ೧೭ರಂದು ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!