ಅಗತ್ಯ ಸೇವೆಯಲ್ಲಿರುವರಿಂದ ಪೋಸ್ಟಲ್ ಮತದಾನ: ಬಿ.ಟಿ.ಕುಮಾರಸ್ವಾಮಿ

KannadaprabhaNewsNetwork |  
Published : Mar 13, 2024, 02:02 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ   | Kannada Prabha

ಸಾರಾಂಶ

ಲೋಕಸಭೆ ಚುನಾವಣೆಯ ಹಿನ್ನೆಲೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಲೋಕಸಭೆ ಚುನಾವಣೆಯ ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗಿರುವ ವಿವಿಧ ಕ್ಷೇತ್ರಗಳ ಅಧಿಕಾರಿ, ಸಿಬ್ಬಂದಿ ಮತದಾನದಿಂದ ವಂಚಿತರಾಗದಂತೆ ಚುನಾವಣಾ ಆಯೋಗ, ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ ಹೇಳಿದರು.

ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಮತದಾನದ ಮಹತ್ವ ಕುರಿತು ಸ್ವೀಪ್ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಮತದಾನದ ದಿನದಂದು ತಮ್ಮ ಕರ್ತವ್ಯದ ಕಾರಣದಿಂದಾಗಿ ಯಾರೊಬ್ಬ ಅರ್ಹ ಮತದಾರನೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಚುನಾವಣಾ ಆಯೋಗವು ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾದವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿದೆ ಎಂದರು.

ಬೆಸ್ಕಾಂ, ಬಿಎಸ್‍ಎನ್‍ಎಲ್, ರೈಲ್ವೆ, ದೂರದರ್ಶನ, ಆಕಾಶವಾಣಿ, ಆರೋಗ್ಯ ಇಲಾಖೆ, ವಿಮಾನಯಾನ, ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಗಳ ನೌಕರರು, ಅಗ್ನಿಶಾಮಕ ಸೇವೆ, ಮಾನ್ಯತೆ ಹೊಂದಿರುವ ಪತ್ರಕರ್ತರು, ಟ್ರಾಫಿಕ್ ಪೊಲೀಸ್, ಆಂಬುಲೆನ್ಸ್ ಸೇವೆಯಲ್ಲಿರುವರು, ಕಾರಾಗೃಹ, ಕಂಟ್ರೋಲ್ ರೂಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮಾಂತರ ಮತ್ತು ನಗರ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿ, ಸಿಬ್ಬಂದಿ ಕರ್ತವ್ಯದ ಕಾರಣದಿಂದಾಗಿ ಮತ ಚಲಾಯಿಸಲು ಸಾಧ್ಯವಾಗದೇ ಇರಬಹುದು. ಇಂತಹ ನೌಕರರಿಗೆ ಮತದಾನ ದಿನದ ಬದಲಿಗೆ ಮತದಾನ ದಿನಕ್ಕೂ ಪೂರ್ವದಲ್ಲಿಯೇ ಫೆಸಿಲಿಟೇಶನ್ ಸೆಂಟರ್ ನಲ್ಲಿ ಅಥವಾ ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನ ಮಾಡುವಂತಹ ಅವಕಾಶವನ್ನು ಬಳಸಬಹುದಾಗಿದೆ ಎಂದರು.

ಫೆಸಿಲಿಟೇಶನ್ ಸೆಂಟರ್‌ನಲ್ಲಿ ಮತದಾನ ಮಾಡಲು ಹಾಗೂ ಪೋಸ್ಟಲ್ ಬ್ಯಾಲಟ್ ಮತದಾನದ ಸೇವೆ ಪಡೆಯಲು, ಸಂಬಂಧಪಟ್ಟ ಇಲಾಖೆಯಿಂದ ನಮೂನೆ 12ಡಿ ನಮೂನೆಯನ್ನು ಪಡೆದು, ಸ್ವೀಕೃತಿ ನೀಡಬೇಕು. ಬಳಿಕ ಭರ್ತಿ ಮಾಡಿದ ನಮೂನೆಯನ್ನು ಸಂಬಂಧಪಟ್ಟ ಕ್ಷೇತ್ರಕ್ಕೆ ನಿಗದಿಪಡಿಸಲಾಗಿರುವ ನೋಡಲ್ ಅಧಿಕಾರಿಗಳಿಗೆ ಆಯಾ ಇಲಾಖಾ ಅಧಿಕಾರಿಗಳು ಸಲ್ಲಿಸಬೇಕು. 12ಡಿ ನಮೂನೆಯನ್ನು ಒಮ್ಮೆ ಸಲ್ಲಿಸಿದ ಬಳಿಕ, ಅಂತಹವರು, ಫೆಸಿಲಿಟೇಶನ್ ಸೆಂಟರ್‌ನಲ್ಲಿ ಅಥವಾ ಪೋಸ್ಟಲ್ ಬ್ಯಾಲಟ್ ಮೂಲಕವೇ ಮತದಾನ ಮಾಡಬೇಕು. ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶ ಇರುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದರು.

ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ತೊಂದರೆ ಇರುವಂತಹ ವಿಶೇಷಚೇತನರು ಹಾಗೂ 85 ವರ್ಷ ಮೇಲ್ಪಟ್ಟ ವಯೋವೃದ್ಧರು ಕೂಡ ಮತದಾನ ದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ, ಅವರ ಮನೆ ಮನೆಗೆ ತೆರಳಿ, ಮತದಾನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ನಿಗದಿತ ನಮೂನೆಯನ್ನು ಆಯಾ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ತಲುಪಿಸಿ, ಮತದಾನ ದಿನಕ್ಕೂ ಪೂರ್ವದಲ್ಲಿಯೇ ವಯೋವೃದ್ಧರ ಮನೆ ಮನೆಗೆ ಚುನಾವಣಾ ಸಿಬ್ಬಂದಿ ತೆರಳಿ, ಮತದಾನ ಪಡೆಯುವರು ಎಂದು ಅಪರ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಬ್ಯಾಲಟ್ ನೋಡಲ್ ಅಧಿಕಾರಿಯಾದ ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ಬಿ ಬೀರಲದಿನ್ನಿ, ಡಿಹೆಚ್‍ಒ ಡಾ.ರೇಣುಪ್ರಸಾದ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್, ಚುನಾವಣಾ ಶಾಖೆಯ ಮಲ್ಲಿಕಾರ್ಜುನ್ ಸೇರಿದಂತೆ ರೈಲ್ವೆ, ಆಕಾಶವಾಣಿ, ಅಗ್ನಿಶಾಮಕ, ಕೆಎಸ್‍ಆರ್‍ಟಿಸಿ, ಟ್ರಾಫಿಕ್ ಪೊಲೀಸ್, ಬೆಸ್ಕಾಂ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!