ಯಲಬುರ್ಗಾ:ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವೈಖರಿಯನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ವಿಕಸಿತ ಭಾರತದ ಅಮೃತಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣನಿಧಿ ಸರ್ಕಾರಕ್ಕೆ ೧೧ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಡಲದ ಕಾರ್ಯಾಗಾರ ಸಭೆ ಉದ್ದೇಶಿಸಿ ಮಾತನಾಡಿದರು.ಮೋದಿಯವರ ಬಲಿಷ್ಠ ನಾಯಕತ್ವದಲ್ಲಿ ಭಾರತ ಹಿಂದೆಂದಿಂಗಿಂತಲೂ ಶಕ್ತಿಯುತವಾಗಿದೆ. ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಶ್ರಮಿಸುತ್ತಿದೆ. ದೇಶದ ಹಣಕಾಸು ವ್ಯವಹಾರದಲ್ಲಿ ಡಿಜಿಟಲ್ ಕ್ರಾಂತಿಯಾಗಿದೆ. ೨೦೧೮ರಲ್ಲಿ ಮಾಸಿಕ ₹ ೬೦ ಸಾವಿರ ಕೋಟಿ ಇದ್ದ ಜಿಎಸ್‌ಟಿ ವರಮಾನ ಸಂಗ್ರಹ ೨೦೨೫ರ ಏಪ್ರಿಲ್‌ನಲ್ಲಿ ದಾಖಲೆಯ ₹ ೨.೩೭ ಲಕ್ಷ ಕೋಟಿ ಆಗಿದೆ ಎಂದರು.ಜನಧನ್ ಯೋಜನೆಯ ಮೂಲಕ ೫೫ ಕೋಟಿ ಜನಸಾಮಾನ್ಯರಿಗೆ ಬ್ಯಾಂಕ್ ಖಾತೆ, ೧೦ ಕೋಟಿ ಮನೆಗಳಿಗೆ ಉಜ್ವಲ ಯೋಜನೆಯ ಮೂಲಕ ಅನಿಲ ಸಂಪರ್ಕ, ಕಿಸಾನ್ ಸನ್ಮಾನ ಯೋಜನೆಯಡಿ ರೈತರ ಖಾತೆಗೆ ನೇರ ಹಣ ವರ್ಗಾವಣೆ, ಆಯುಷ್ಮಾನ್ ಯೋಜನೆಯಡಿ ಬಡವರಿಗೆ ₹ ೧ ಲಕ್ಷ ವರೆಗಿನ ಚಿಕಿತ್ಸಾ ವೆಚ್ಚಕ್ಕೆ ನೆರವು ನೀಡಲಾಗಿದೆ. ಇವೆಲ್ಲ ನೇರವಾಗಿ ಜನಸಾಮಾನ್ಯರಿಗೆ ಪ್ರಯೋಜನಗಳಾಗಿವೆ ಎಂದರು.