ನರಗುಂದ: ಜಗತ್ತು ನಿರ್ಮಾಣವಾಗಿದ್ದು ತಾಯಿಯಿಂದ ಹೀಗಾಗಿ ಆಕೆ ಇಲ್ಲದೆ ಈ ಜಗತ್ತನ್ನು ಕಲ್ಪಿಸಲು ಸಾಧ್ಯವಿಲ್ಲ ಎಂದು ಅನಗವಾಡಿಯ ಪೂರ್ಣನಂದ ಆಶ್ರಮದ ಮಾತೋಶ್ರೀ ಅನಸೂಯ ತಾಯಿ ಹೇಳಿದರು.
ಅವರು ತಾಲೂಕಿನ ಶಿರೋಳದ ಗ್ರಾಮದ ಜ. ಶ್ರೀಯಚ್ಚರಸ್ವಾಮಿಗಳ ಗವಿಮಠದಲ್ಲಿ ನಡೆದ 5ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಜಗತ್ತು ನಿರ್ಮಾಣವಾಗಿದ್ದು, ಮೂಲ ತಾಯಿಯಿಂದ ಹೀಗಾಗಿ ಆಕೆ ಇಲ್ಲದೆ ಈ ಜಗತ್ತನ್ನು ಕಲ್ಪಿಸಲು ಸಾಧ್ಯವೇ ಇಲ್ಲ ತಾಯಿ ಇಲ್ಲದ ಜಗತ್ತು ಶೂನ್ಯವಿದ್ದಂತೆ ಎಂದರು.ಕೆವಿಜಿ ಬ್ಯಾಂಕಿನ ವ್ಯವಸ್ಥಾಪಕಿ ಶೋಭಾ ಕುಬಕಡ್ಡಿ ಮಾತನಾಡಿ, ಹೆಣ್ಣು ಅಬಲೆ ಅಲ್ಲ ಸಬಲೆ ಆಕೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸುವ ತಾಕತ್ತು ಇದೆ, ಆದರೆ ಆ ಸಾಧನೆಗೆ ಬಹು ಮುಖ್ಯವಾಗಿ ಮನೆಯವರಿಂದ ಸಹಕಾರ ಮುಖ್ಯ, ಸಹಕಾರ ಇದ್ದರೆ ಹೆಣ್ಣುಮಕ್ಕಳು ಇನ್ನು ಹೆಚ್ಚಾಗಿ ಮುಂದೆ ಬರಲು ಸಾಧ್ಯ ಎಂದರು.
ಭಾಗ್ಯವತಿ ಸಪ್ಪರದ ಮಾತಾನಾಡಿ, ಹೆಣ್ಣಿಗೆ ಆತ್ಮಸ್ಥೈರ್ಯ ಬಹಳಷ್ಟು ಮುಖ್ಯ. ಸಾಧಿಸುವ ಛಲ ಒಂದಿದ್ದರೆ ಏನನ್ನಾದರೂ ಸಾಧಿಸಬಲ್ಲಳು ಎಂದರು.ಈ ವೇಳೆ ಮುಂಡರಗಿಯ ಸಾಹಿತಿ ಗಿರಿಜಾ ಸೂಡಿ ಹಾಗೂ ಗವಿಮಠದ ಯಚ್ಚರ ಶ್ರೀಗಳು ಮಾತನಾಡಿದರು. ಗದಗ ಜಿಲ್ಲಾ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಶಿವಲೀಲಾ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಸಾಧಕಿಯರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ಅಭಿನವ ಯಚ್ಚರ ಶ್ರೀಗಳು, ಮಾಜಿ ತಾಪಂ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಕಿರಣಗೌಡ ಪಾಟೀಲ, ಡಾ.ವಿದ್ಯಾಶ್ರೀ ಹುಲ್ಲೂರು, ಬಸವರಾಜ ಬಳ್ಳೊಳ್ಳಿ, ಪಾಂಡುರಂಗ ಪತ್ತಾರ, ಶ್ರೀಕಾಂತ ದೊಡ್ಡಮನಿ, ವಿನಾಯಕ ಶಾಲದಾರ, ಸುನಿತಾ ಹಾವೇರಿ, ಸುನೀಲ ಕಳಸದ, ಸುಮಂಗಲ ಪತ್ತಾರ, ಕಾಮಾಕ್ಷಿ ಪತ್ತಾರ ಸೇರಿದಂತೆ ಮುಂತಾದವರು ಇದ್ದರು.