ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಆಧಾರ್ ನೀಡಲು ಡಿಸಿ ಸೂಚನೆ
ಪ್ರತಿಯೊಂದು ಕೆಲಸಕ್ಕೂ ಈಗ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ನಿರಾಶ್ರಿತ ಕೇಂದ್ರದಲ್ಲಿರುವ ಸುಮಾರು ೧೨೦ ಮಂದಿಗೆ ಆಧಾರ್ ಕಾರ್ಡ್ ಇಲ್ಲವೇ ಇಲ್ಲ. ಇದರಿಂದ ಸರ್ಕಾರದ ಮತ್ತು ಕೇಂದ್ರದ ಹಲವು ಯೋಜನೆಗಳು ಸೇರಿದಂತೆ ಬ್ಯಾಂಕ್ ಖಾತೆಯನ್ನೂ ಸಹ ತೆರೆಯಲು ಸಮಸ್ಯೆಯಾಗಿತ್ತು. ಈ ಹಿಂದೆ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ್ದಾಗ ಅಲ್ಲಿರುವ ವ್ಯಕ್ತಿಗಳಿಗೆ ಆಧಾರ್ ಕಾರ್ಡ್ ಇಲ್ಲದ ಮಾಹಿತಿ ದೊರಕಿತು. ಕೂಡಲೇ ಅಂದಿನ ತಹಸೀಲ್ದಾರ್ ಎಸ್.ವೆಂಕಟೇಶಪ್ಪಗೆ ಆಧಾರ್ ಕಾರ್ಡ್ ನೊಂದಣಿಗೆ ಸೂಚಿಸಿದ್ದರು.ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಬೆಂಗಳೂರಿನ ಖನಿಜ ಭವನದಲ್ಲಿನ ಆಧಾರ್ ಸೆಂಟರ್‌ಗೆ ಮನವಿ ಸಲ್ಲಿಸಿ, ನಿರಾಶ್ರಿತರ ಕೇಂದ್ರದಲ್ಲಿಯೇ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಿದ್ದರು. ಅದರಂತೆ ಒಟ್ಟು ೧೨೦ ಮಂದಿಗೆ ಆಧಾರ್ ಕಾರ್ಡ್ ನೋಂದಣಿಯನ್ನು ಮಾಡಿಸಲಾಗಿತ್ತು. ಆದರೆ ಕೇವಲ ೪ ಮಂದಿಗೆ ಮಾತ್ರ ಆಧಾರ್ ಕಾರ್ಡ್ ಯಶಸ್ವಿಯಾಗಿ ಜನರೇಟ್ ಆಗಿತ್ತು. ಉಳಿದ ೧೧೬ ಮಂದಿಯ ಅರ್ಜಿ ತಿರಸ್ಕೃತಗೊಂಡಿತ್ತು.
ಇಂದಿನ ತಹಸೀಲ್ದಾರ್ ಕೆ.ಎನ್ ಸುಜಾತಾ ಉಳಿದ ೧೧೬ ಮಂದಿ ನಿರಾಶ್ರಿತರಿಗೂ ಆಧಾರ್ ಕಾರ್ಡ್ ಕೊಡಲಿಸಲು ಮತ್ತೊಮ್ಮೆ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಿದ್ದಾರೆ. ಕಳೆದ ಎರಡು ದಿನಗಳಿಂದ ನೋಂದಣಿ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಎಲ್ಲರಿಗೂ ಆಧಾರ್ ಕಾರ್ಡ್ ದೊರಕುವ ಸಾಧ್ಯತೆ ಇದೆ.