ಕನ್ನಡಪ್ರಭ ವಾರ್ತೆ, ದಾವಣಗೆರೆ
ದೆಹಲಿ ವಿಧಾನಸಭೆಯಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿ 27 ವರ್ಷಗಳ ನಂತರ ಬಿಜೆಪಿ ಮತ್ತೆ ದೇಶದ ರಾಜಧಾನಿಯ ಅಧಿಕಾರ ಗದ್ದುಗೆ ಏರಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಜೈಕಾರ ಹಾಕುವ ಜೊತೆಗೆ ಸಿಹಿ ಹಂಚಿ, ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಬಿಜೆಪಿ ಜಿಲ್ಲಾ ಕಚೇರಿಯಿಂದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಇತರರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪಕ್ಷದ ಪರ ಜಯಘೋಷ ಹಾಕುತ್ತಾ ಶ್ರೀ ಜಯದೇವ ವೃತ್ತಕ್ಕೆ ಆಗಮಿಸಿದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪರಸ್ಪರರಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.
ಎನ್.ರಾಜಶೇಖರ ನಾಗಪ್ಪ ಮಾತನಾಡಿ, ಸುಳ್ಳುಗಳನ್ನು ಹೇಳಿಕೊಂಡು, ಅಪಪ್ರಚಾರವನ್ನು ಮಾಡಿಕೊಂಡೇ ಬಂದ ಆಮ್ ಆದ್ಮಿ ಪಕ್ಷದ ಭ್ರಷ್ಟಾಚಾರ, ಹಗರಣಗಳು ಒಂದೊಂದಾಗಿ ಹೊರಬಂದಿದ್ದವು. ಬಿಜೆಪಿಯನ್ನು ನಿರಂತರ ದೂಷಿಸಿಕೊಂಡೇ ಬಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಕಳೆದ 3 ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರವನ್ನು ಗೆಲ್ಲಿಸಲಾಗಿಲ್ಲ. ರಾಷ್ಟ್ರ ರಾಜಧಾನಿಯಲ್ಲೇ ವಿಳಾಸವಿಲ್ಲದಂತಾದ ಕಾಂಗ್ರೆಸ್ ಪಕ್ಷಕ್ಕೆ ಇನ್ನು ದೇಶದಲ್ಲೇ ಉಳಿಗಾಲವೂ ಇಲ್ಲ ಎಂದು ಭವಿಷ್ಯ ನುಡಿದರು.ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳ ಇಡೀ ವಿಶ್ವದ ಗಮನ ಸೆಳೆದಿದೆ. ಇಂತಹ ಪವಿತ್ರ ಪುಣ್ಯಕ್ಷೇತ್ರದ ಧಾರ್ಮಿಕ ಆಚರಣೆ, ನಂಬಿಕೆ, ಪ್ರಧಾನಿ ಪುಣ್ಯಸ್ನಾನದ ಬಗ್ಗೆ ಹಗುರವಾಗಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ದೆಹಲಿ ಮತದಾರರು ತಕ್ಕ ಪಾಠವನ್ನೇ ಕಲಿಸಿದ್ದಾರೆ ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳು, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ, ಪಾಲಿಕೆ ವಿಪಕ್ಷ ನಾಯಕ ಆರ್.ಎಲ್.ಶಿವಪ್ರಕಾಶ, ಪಾಲಿಕೆ ಸದಸ್ಯರಾದ ಮಾಜಿ ಮೇಯರ್ ಎಸ್.ಟಿ.ವೀರೇಶ, ಆರ್. ಶಿವಾನಂದ, ಬಿ.ಎಂ.ಸತೀಶ ಕೊಳೇನಹಳ್ಳಿ, ಉತ್ತರ ಮಂಡಲ ಅಧ್ಯಕ್ಷ ತಾರೇಶ ನಾಯ್ಕ, ಮುಖಂಡರು, ಇತರರು ಇದ್ದರು.- - - -8ಕೆಡಿವಿಜಿ4, 5:
ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದ ಹಿನ್ನೆಲೆ ದಾವಣಗೆರೆಯಲ್ಲಿ ಪಕ್ಷದ ಮುಖಂಡರು ಪರಸ್ಪರರಿಗೆ ಸಿಹಿ ತಿನ್ನಿಸಿ, ವಿಜಯೋತ್ಸವ ಆಚರಿಸಿದರು.