ಲಾರ್ಡ್‌ ಮೆಕಾಲೆ ಶಿಕ್ಷಣ ಪದ್ಧತಿ ಕೈಬಿಡಿ

KannadaprabhaNewsNetwork |  
Published : May 06, 2026, 02:00 AM IST
ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಮಾತನಾಡಿದರು. | Kannada Prabha

ಸಾರಾಂಶ

ಸ್ವಾತಂತ್ರ್ಯ ಹೋರಾಟಕ್ಕಾಗಿ ಸ್ಥಾಪನೆಯಾಗಿದೆ ಎಂಬ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಧ್ಯೇಯವೇ ಬೇರೆಯಾಗಿತ್ತು. ಈ ಸಂಘಟನೆಯ ಅಜೆಂಡಾ, ದಾಖಲೆ ಗಮನಿಸಿದಲ್ಲಿ ಇದು ಸ್ವಾತಂತ್ರ್ಯ ಬಯಸಿದ್ದೇ ಇಲ್ಲ. ನಮಗೆ ನೌಕರಿ ಕೊಡಿ ಎಂದು ಬ್ರಿಟಿಷರ ಬಳಿ ಭಿಕ್ಷೆ ಬೇಡಲು ಹುಟ್ಟಿಕೊಂಡ ಸಂಘಟನೆಯಾಗಿತ್ತು.

ಹುಬ್ಬಳ್ಳಿ:

ಲಾರ್ಡ್ ಮೆಕಾಲೆ ಶಿಕ್ಷಣ ಪದ್ಧತಿಯಿಂದ ದೇಶದ ಜನತೆ ನಲುಗಿ ಹೋಗಿದ್ದಾರೆ. ಇಂದಿಗೂ ಬ್ರಿಟಿಷ್ ಶಿಕ್ಷಣ ಪದ್ಧತಿ ಅನುಸರಿಸುತ್ತಿರುವ ನಾವು ಕಪ್ಪು ಚರ್ಮದ ಬ್ರಿಟಿಷರಂತೆ ವರ್ತಿಸುತ್ತಿದ್ದೇವೆ. ಈ ಪದ್ಧತಿ ಕೈಬಿಟ್ಟು ಭಾರತದ ಪರಂಪರಾಗತ ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಮಂಗಳವಾರ ಇಲ್ಲಿನ ಗೋಕುಲ ರಸ್ತೆಯ ರೇಣುಕಾ ನಗರದಲ್ಲಿನ ಭಾರತೀಯ ಶಿಕ್ಷಣ ಪ್ರಸಾರ ಸಮಿತಿ ಸಂಚಾಲಿತ ಕೇಶವ ವಿದ್ಯಾ ಕೇಂದ್ರದ 2ನೇ ಮಹಡಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

1835ರಲ್ಲಿ ಲಾರ್ಡ್ ಮೆಕಾಲೆ ಭಾರತೀಯರನ್ನು ಒಡೆದಾಳುವ ಉದ್ದೇಶದಿಂದಲೇ ನೂತನ ಶಿಕ್ಷಣ ಪದ್ಧತಿ ಜಾರಿಗೆ ತಂದ. ಇದಾದ ಕೆಲವೇ ವರ್ಷಗಳಲ್ಲಿ ದಿನಕ್ಕೆ ಮೂರು ಹೊತ್ತು ಪೂಜೆ ಮಾಡುತ್ತಿದ್ದ ಹಿಂದೂಗಳು ನಾಸ್ತಿಕರಾಗಿದ್ದರು. ನೂತನ ಶಿಕ್ಷಣ ಪದ್ಧತಿಯ ಪರಿಣಾಮವಾಗಿ 1885ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆ ಆಗುವುದರೊಂದಿಗೆ ಮೆಕಾಲೆಯ ಉದ್ದೇಶವೂ ಈಡೇರಿತ್ತು. ಇಷ್ಟೆಲ್ಲ ಆದರೂ ನಾವು ಇಂದಿಗೂ ಅದೇ ಶಿಕ್ಷಣ ಪದ್ಧತಿ ಪಾಲಿಸುತ್ತಿದ್ದೇವೆ. ಇದನ್ನು ತಪ್ಪಿಸಲು ಮತ್ತು ಭಾರತದ ಪರಂಪರಾಗತ ಶಿಕ್ಷಣ ಪದ್ಧತಿ ಜಾರಿಗೊಳಿಸುವ ಉದ್ದೇಶದಿಂದಲೇ ಭಾರತೀಯ ಶಿಕ್ಷಣ ಪ್ರಸಾರ ಸಮಿತಿ ಮತ್ತು ವಿದ್ಯಾ ಭಾರತಿ ಪ್ರತಿಷ್ಠಾನಗಳು ದೇಶಾದ್ಯಂತ ಶ್ರಮಿಸುತ್ತಿವೆ ಎಂದರು.

ಸ್ವಾತಂತ್ರ್ಯ ಹೋರಾಟಕ್ಕಾಗಿ ಸ್ಥಾಪನೆಯಾಗಿದೆ ಎಂಬ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಧ್ಯೇಯವೇ ಬೇರೆಯಾಗಿತ್ತು. ಈ ಸಂಘಟನೆಯ ಅಜೆಂಡಾ, ದಾಖಲೆ ಗಮನಿಸಿದಲ್ಲಿ ಇದು ಸ್ವಾತಂತ್ರ್ಯ ಬಯಸಿದ್ದೇ ಇಲ್ಲ. ನಮಗೆ ನೌಕರಿ ಕೊಡಿ ಎಂದು ಬ್ರಿಟಿಷರ ಬಳಿ ಭಿಕ್ಷೆ ಬೇಡಲು ಹುಟ್ಟಿಕೊಂಡ ಸಂಘಟನೆಯಾಗಿತ್ತು. ಈ ಸಂಘಟನೆಗೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಸೇರಿಕೊಂಡ ಮೇಲೆ ಸ್ವಾತಂತ್ರ್ಯ ಹೋರಾಟ ಆರಂಭಿಸಿತ್ತು ಎಂದು ವಿವರಿಸಿದರು.

ಗದುಗಿನ ಶಿವಾನಂದ ಬೃಹನ್ಮಠದ ಜ. ಶಿವಾನಂದ ಶ್ರೀ ಆಶೀರ್ವಚನ ನೀಡಿ, ನೂರಾರು ಯುದ್ಧ, ಸಾವಿರಾರು ರೀತಿಯ ಆಕ್ರಮಣಗಳು ಈ ದೇಶದ ಮೇಲೆ ನಡೆದಿರಬಹುದು. ಆದರೆ, ಸಾವಿರಾರು ವರ್ಷದಿಂದಲೂ ಈ ವರೆಗೆ ಒಂದೇ ಒಂದು ಜ್ಞಾನ ಕ್ಷೇತ್ರವನ್ನು ಕೂಡ ಭಾರತ ಕಳೆದುಕೊಂಡಿಲ್ಲ. ಈಗಲೂ ಕೂಡ ಜಗತ್ತು ಭಾರತಕ್ಕೆ ಹೆದರುತ್ತೆ ಎಂದರೆ ಸಾಮರ್ಥ್ಯ ನೋಡಿಯಲ್ಲ, ಬುದ್ಧಿಗಾಗಿ ಎಂಬುದು ಸತ್ಯ ಎಂದರು.

ಕೇಶವ ವಿದ್ಯಾ ಕೇಂದ್ರದ ಆಡಳಿತಾಧಿಕಾರಿ ಶ್ರೀಧರ ಜೋಶಿ ಮಾತನಾಡಿದರು. ಇದೇ ವೇಳೆ ಕೇಶವ ವಿದ್ಯಾ ಕೇಂದ್ರದ 2ನೇ ಮಹಡಿ ನಿರ್ಮಾಣಕ್ಕೆ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ವಿದ್ಯಾ ಕೇಂದ್ರದ ಅಧ್ಯಕ್ಷ ಶಿವಲಿಂಗಯ್ಯ ಶಿವಯೋಗಿಮಠ, ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಮುಖ್ಯೋಪಾಧ್ಯಾಯಿನಿ ಶರಾವತಿ ಕುಲಕರ್ಣಿ, ಶಾಸಕ ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಪ್ರದೀಪ ಶೆಟ್ಟರ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ, ಮಜೇಥಿಯಾ ಫೌಂಡೇಶನ್‌ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ, ಗೌತಮ ಬಾಫನಾ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ-ಶಿರಸಿ ರಸ್ತೆ ದುರಸ್ತಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ಬಿಎಸ್‌ವೈ ಅಭಿಮಾನೋತ್ಸವಕ್ಕೆ ಹುಬ್ಬಳ್ಳಿಯಿಂದ ಸಾವಿರಾರು ಜನ