- ಕಂದಾಯ ಸಚಿವ, ನೋಂದಣಿ-ಮುದ್ರಾಂಕ ಇಲಾಖೆ ಕ್ರಮಕ್ಕೆ ವಿರೋಧ - - -
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮೂಲಕ ಪ್ರತಿಭಟನಾ ಬೈಕ್ ರ್ಯಾಲಿ ಆರಂಭಿಸಿದ ಸಂಘದ ಪದಾಧಿಕಾರಿಗಳು, ಪತ್ರ ಬರಹಗಾರರು ಕಂದಾಯ ಇಲಾಖೆ ಸಚಿವರು, ಇಲಾಖೆ ಅಧಿಕಾರಿಗಳ ಪೇಪರ್ ಲೆಸ್ ನೋಂದಣಿ ಕಾರ್ಯದ ಕ್ರಮವನ್ನು ಖಂಡಿಸಿದರು. ಘೋಷಣೆಗಳ ಕೂಗುತ್ತಾ ಡಿಸಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.
ಇದೇ ವೇಳೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾನಂದ ಮಾತನಾಡಿ, ಕಂದಾಯ ಸಚಿವ ಕೃಷ್ಣಬೈರೇಗೌಡ ಈಚೆಗೆ ಚಾಮರಾಜನಗರ ಜಿಲ್ಲೆ ಯಳಂದೂರು ಗ್ರಾಮದಲ್ಲಿ ಪೇಪರ್ ಲೆಸ್ ಎಂಬ ನಾಮಾಂಕಿತದಡಿ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಪೇಪರ್ ಲೆಸ್ ನೋಂದಣಿಯಲ್ಲಿ ನೋಂದಣಿಯಾಗುವ ದಸ್ತಾವೇಜಿನಲ್ಲಿ ಮಾರಾಟಗಾರರು, ಖರೀದಿದಾರರ ಮತ್ತು ಸಾಕ್ಷಿದಾರರ ಸಹಿ ಹಾಕುವ ವ್ಯವಸ್ಥೆಯೇ ಇರುವುದಿಲ್ಲ. ಈ ಹಿಂದಿನಂತೆ ದಸ್ತಾವೇಜನ್ನು ತಯಾರಿಸಿ, ಕಾವೇರಿ-2.0ನಲ್ಲಿ ಅಪ್‌ಲೋಡು ಮಾಡಲೇಬೇಕು ಎಂದರು.ದಸ್ತಾವೇಜಿನ ಮಾರಾಟಗಾರರು, ಖರೀದಿದಾರರು, ಸಾಕ್ಷಿದಾರರಿಂದ ಒಟಿಪಿಯನ್ನು ದಸ್ತಾವೇಜು ಬರಹಗಾರರು ಪಡೆದು, ಮಾರಾಟಗಾರರು, ಖರೀದಿದಾರರ ಮತ್ತು ಸಾಕ್ಷಿಗಳ ಸಹಿ ಇಲ್ಲದಂತೆ ಪಬ್ಲಿಕ್ ಲಾಗಿನ್‌ನಲ್ಲಿ ಅಪ್‌ಲೋಡು ಮಾಡಬೇಕಿರುತ್ತದೆ. ಅನಂತರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪುನಃ ಒಟಿಪಿ ಪಡೆದು, ಫೋಟೋ ಮತ್ತು ಹೆಬ್ಬೆಟ್ಟನ್ನು ಪಡೆದು ನಂತರ ದಸ್ತಾವೇಜು ನೋಂದಣಿಯಾಗುತ್ತದೆ. ಆದರೆ, ಪೇಪರ್ ಲೆಸ್ ಎನ್ನುವ ಕಂದಾಯ ಸಚಿವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ದಸ್ತಾವೇಜು ತಯಾರಿಸಿದ ಪತ್ರ ಅಪ್‌ಲೋಡು ಮಾಡಿದ ನಂತರವೇ ರಿಜಿಸ್ಟರ್ ಆಗುತ್ತದೆ. ಹಾಗಾದರೆ ಪೇಪರ್ ಲೆಸ್ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ಪೇಪರ್ ಲೆಸ್ ನೋಂದಣಿಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸುವ ಮೂಲಕ ಒತ್ತಾಯಸುತ್ತೇವೆ. ಈಗಿರುವ ದಸ್ತಾವೇಜು ನೋಂದಣಿಯನ್ನು ಯಥಾ ಸ್ಥಿತಿಯಲ್ಲೇ ಖರೀದಿದಾರರಿಗೆ ದಸ್ತಾವೇಜು ಬರೆಯಿಸಿಕೊಂಡವರಿಗೆ ನೋಂದಣಿಯಾದ ದಸ್ತಾವೇಜು ದಾಖಲೆ ಸಿಗುವಂತಾಗಬೇಕು. ಕಂದಾಯ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಪೇಪರ್ ಲೆಸ್ ಅಂತೆಲ್ಲಾ ಮಾಡಲು ಹೋಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುವಂತಹ ಪರಿಸ್ಥಿತಿಯನ್ನು ತಂದೊಡ್ಡಬಾರದು ಎಂದು ಬಿ.ವಿ.ಶಿವಾನಂದ ಸೂಚ್ಯವಾಗಿ ಎಚ್ಚರಿಸಿದರು.
- - -
* ತಮಿಳುನಾಡು, ಆಂಧ್ರದಲ್ಲಿ ವ್ಯವಸ್ಥಿತ ಜಾರಿ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಪೇಪರ್ ಲೆಸ್ ನೋಂದಣಿಯನ್ನು ತುಂಬಾ ವ್ಯವಸ್ಥಿತವಾಗಿ ಜಾರಿಗೊಳಿಸಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಮೂಲ ಪ್ರತಿ ಪಡೆಯಲಾಗದೇ, ಜೆರಾಕ್ಸ್ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಒಂದು ವೇಳೆ ಆಸ್ತಿ ವ್ಯಾಜ್ಯವು ನ್ಯಾಯಾಲಯಕ್ಕೆ ಹೋದಲ್ಲಿ, ಪತ್ರ ತಯಾರಿಸಿದವರು ಯಾರು, ಮಾರಾಟಗಾರರು ಸಹಿ ಹಾಕಿದ್ದಾರಾ, ಸಾಕ್ಷಿದಾರರು ಯಾರು ಎಂಬ ಹತ್ತಾರು ಪ್ರಶ್ನೆಗಳಿಗೆ ಉತ್ತರ ಇಲ್ಲವಾಗಿದೆ. ಕಂದಾಯ ಸಚಿವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೆಲವೇ ಕೆಲ ಅಧಿಕಾರಿಗಳು ಪೂರ್ವಾಪರ ಯೋಚಿಸದೇ, ಏಕಾಏಕಿ ಇಂತಹ ಅವೈಜ್ಞಾನಿಕ ವ್ಯವಸ್ಥೆ ಜಾರಿಗೊಳಿಸಿದ್ದು ಸರಿಯಲ್ಲ.
- - -
ಸಾರ್ವಜನಿಕರಿಗೆ ಮಾಹಿತಿ ನೀಡದೇ ಕಂದಾಯ ಸಚಿವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೆಲವೇ ಕೆಲ ಅಧಿಕಾರಿಗಳು ಏಕಾಏಕಿ ಪೇಪರ್ ಲೆಸ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದನ್ನು ಖಂಡಿಸಿ ದಾವಣಗೆರೆಯಲ್ಲಿ ಸೋಮವಾರ ಜಿಲ್ಲಾ ಪತ್ರ ಬರಹಗಾರರ ಸಂಘ ಪ್ರತಿಭಟನೆ ನಡೆಸಿತು.