- ಹೊನ್ನಾಳಿ ನಿವೇಶನರಹಿತರಿಗೆ ಗೋಮಾಳದ ಹಕ್ಕುಪತ್ರ ಕೊಟ್ಟರೆ ಕಾನೂನು ಹೋರಾಟ: ರೈತರ ಎಚ್ಚರಿಕೆ । ಜಿಲ್ಲಾಡಳಿತಕ್ಕೆ ಮನವಿ - - -
ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ಬೇಚಾರ ಗ್ರಾಮ ಮಲ್ಲೆದೇವರಕಟ್ಟೆಯ ರಿ.ಸ.ನಂ.4ರಲ್ಲಿ ನೂರಾರು ವರ್ಷಗಳ ಗೋಮಾಳ ಜಮೀನನ್ನು ಕಾನೂನುಬಾಹಿರವಾಗಿ ನಿವೇಶನಗಳಾಗಿ ಮಾಡಿರುವುದನ್ನು ರದ್ದುಪಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಜಿಲ್ಲಾ ಹಾಗೂ ಹೊನ್ನಾಳಿ ತಾಲೂಕು ಘಟಕದಿಂದ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರನ್ನು ಭೇಟಿ ಮಾಡಿದ ಸಂಘಟನೆಗಳ ಮುಖಂಡರ ನಿಯೋಗವು, ಮಲ್ಲೆದೇವರಕಟ್ಟೆಯಲ್ಲಿ ಶತಮಾನಗಳಿಂದಲೂ ಸರ್ಕಾರಿ ದಾಖಲೆಗಳಲ್ಲಿ ಊರ ದನ-ಕರುಗಳಿಗೆ ಕಾಯ್ದಿರಿಸಿದ್ದ ಗೋಮಾಳವನ್ನು 2019ರಿಂದ 2021ರ ಅವಧಿಯಲ್ಲಿ ವಿವಿಧ ಹಂತಗಳಲ್ಲಿ 3 ಸಲ ಒಟ್ಟು 29 ಎಕರೆ 35 ಗುಂಟೆ ವಿಸ್ತೀರ್ಣದ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ ನಿವೇಶನ ಮಾಡುವುದನ್ನು ಕೈಬಿಡುವಂತೆ ರೈತ ಮುಖಂಡರು ಒತ್ತಾಯಿಸಿದರು.ಇದೇ ವೇಳೆ ಮಾತನಾಡಿದ ರೈತ ಮುಖಂಡರು, ಹೊನ್ನಾಳಿ ಪಟ್ಟಣದ ನಿವೇಶನರಹಿತರಿಗೆ ಅಕ್ರಮವಾಗಿ ಮಂಜೂರು ಮಾಡಿದ ನಿವೇಶನಗಳನ್ನು ರದ್ದುಪಡಿಸಿ, ಸರ್ಕಾರಿ ಗೋಮಾಳವಾಗಿ ಯಥಾಸ್ಥಿತಿ ಕಾಪಾಡಬೇಕು. 2020-21ರಿಂದಲೂ ಈವರೆಗೆ ಜಿಲ್ಲಾಡಳಿತ, ಹೊನ್ನಾಳಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದು, ಈವರೆಗೆ ಹೋರಾಟ ಮಾಡುತ್ತಿದ್ದರೂ ರದ್ದುಪಡಿಸಿಲ್ಲ. ಇನ್ನಾದರೂ ಗೋಮಾಳವನ್ನು ಯಥಾವತ್ ಕಾಪಾಡಬೇಕು ಎಂದು ಆಗ್ರಹಿಸಿದರು.
ಗೋಮಾಳದ ಗಿಡ-ಮರಗಳನ್ನು ಕಡಿಯಲು ಮುಂದಾದರೆ ಅಂತಹ ಅಧಿಕಾರಿಗಳ ವಿರುದ್ಧ ಅರಣ್ಯ ಮತ್ತು ಪರಿಸರ ನಾಶ ಕಾಯ್ದೆಯಡಿ ಸೂಕ್ತ ಕೇಸ್ ದಾಖಲಿಸಿ, ಕಾನೂನು ಹೋರಾಟ ನಡೆಸುತ್ತೇವೆ. ಗೋಮಾಳದಲ್ಲಿ ಬೆಳೆದ ಗಿಡ ಮರಗಳ ವಾಸ್ತವದ ಫೋಟೋ ಮತ್ತು ವೀಡಿಯೋ ಚಿತ್ರೀಕರಣ ಮಾಡಿಸಿಕೊಂಡು, ದಾಖಲೆಗಳ ಸಮೇತ ಹಸಿರು ನ್ಯಾಯಾಲಯದಲ್ಲೂ ಮೊಕದ್ದಮೆ ದಾಖಲು ಮಾಡಲಿದ್ದೇವೆ ಎಂದು ರೈತ ಮುಖಂಡರು ಎಚ್ಚರಿಸಿದರು.
ಹಾಲಿ ಗೋಮಾಳದಲ್ಲಿ ಬೆಳೆದಿರುವ 50-60 ಅಡಿ ಎತ್ತರದ ಗಿಡ ಮತ್ತು ಶ್ರೀಗಂಧದ ಮರಗಳು, ಇತರೆ ಗಿಡ- ಮರಗಳ ಜೊತೆಗೆ ಅಲ್ಲಿರುವ ವನ್ಯಜೀವಿ, ಪ್ರಾಣಿ-ಪಕ್ಷಿಗಳ ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿರುವ ಜಿಲ್ಲಾಡಳಿತ ಅನಾದಿ ಕಾಲದಿಂದಿರುವ ಗೋಮಾಳ ಉಳಿಸಿ, ರಕ್ಷಣೆ ಮಾಡಬೇಕು ಎಂದು ರೈತರು ಮನವಿ ಮಾಡಿದರು.
- - -