ಕುಡಿಯುವ ನೀರು ಪೂರೈಸಲು ರೈತ ಸಂಘದ ಆಗ್ರಹ

KannadaprabhaNewsNetwork |  
Published : May 12, 2026, 01:30 AM IST
ಫೋಟೋ 11ಪಿವಿಡಿ1,11ಪಿವಿಜಿ1ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾದ ಹಿನ್ನಲೆಯಲ್ಲಿ,ನಿವಾರಣೆಗೆ ಒತ್ತಾಯಿಸಿ,ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ಪ್ರತಿಭಟನೆ,ಗ್ರೆಡ್‌ 2 ತಹಸೀಲ್ದಾರ್‌ ಪ್ರಸಾದ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಹಿನ್ನಲೆಯಲ್ಲಿ, ರಾಜ್ಯ ರೈತ ಸಂಘ ತಾಲೂಕು ಶಾಖೆ ವತಿಯಿಂದ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಬೇಸಿಗೆ ಹಿನ್ನೆಲೆ ಈಗಾಗಲೇ ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ನೀರಿಗಾಗಿ ಸಾರ್ವಜನಿಕರು ಮತ್ತು ಗ್ರಾಪಂ ನೀರಗಂಟಿಗಳ ಮಧ್ಯೆ ನಿತ್ಯ ಜಗಳ ನಡೆಯುತ್ತಿದೆ. ಕೊಳವೆಬಾವಿ ಕೊರೆಸಲು ಹಾಗೂ ಘಟಕಗಳ ದುರಸ್ತಿಗೆ ಗ್ರಾಪಂಗೆ ತಲಾ 1 ಕೋಟಿ ಅನುದಾನ ಕಲ್ಪಿಸುವ ಮೂಲಕ ಸಮರ್ಪಕ ಶುದ್ಧ ನೀರು ಪೂರೈಕೆಗೆ ಕ್ರಮವಹಿಸುವಂತೆ ಸರ್ಕಾರ ಮತ್ತು ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ದೊಡ್ಡಹಟ್ಟಿ ಪೂಜಾರಪ್ಪ ಆಗ್ರಹಿಸಿದರು.

ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಹಿನ್ನಲೆಯಲ್ಲಿ, ರಾಜ್ಯ ರೈತ ಸಂಘ ತಾಲೂಕು ಶಾಖೆ ವತಿಯಿಂದ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಬರಪೀಡಿತ ಪ್ರದೇಶವಾಗಿದ್ದು, ಕಳೆದ 7ವರ್ಷದ ಹಿಂದೆ, ಇಲ್ಲಿನ ರೈತ ಹಾಗೂ ಸಂಘಸಂಸ್ಥೆಗಳ ಹೋರಾಟದ ಫಲವಾಗಿ ತಾಲೂಕಿಗೆ ತುಂಗಭದ್ರಾ ಯೋಜನೆ ನೀರು ಅನುಷ್ಟಾನವಾಗಿದೆ. ಡ್ಯಾಂನಲ್ಲಿ ನೀರಿನ ಅಭಾವ ಕಂಡುಬಂದಿದ್ದ ಹಿನ್ನಲೆಯಲ್ಲಿ ಕಳೆದ 15ದಿನಗಳಿಂದ ತಾಲೂಕಿಗೆ ಪೂರೈಕೆ ಅಗುತ್ತಿರುವ ತುಂಗಭದ್ರಾ ಯೋಜನೆಯ ಕುಡಿಯುವ ನೀರು ಸ್ಧಗಿತಗೊಂಡಿದೆ. ಪರಿಣಾಮ ತಾಲೂಕಿನ 34 ಗ್ರಾಪಂ ವ್ಯಾಪ್ತಿಯ ಗ್ರಾಪಂಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ.ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಅವರು, ಪಾವಗಡಕ್ಕೆ ಆಗಮಿಸಿ ತುಂಗಭದ್ರಾ ಯೋಜನೆಯ ಕುಡಿಯುವ ನೀರಿನ ಪೂರೈಕೆಗೆ ಚಾಲನೆ ನೀಡಿದ್ದರು. ಆದರೆ ಒಂದು ವರ್ಷದ ಒಳಗೆ ತುಂಗಭದ್ರಾ ಯೋಜನೆ ನೀರು ಸ್ಥಗಿತವಾಗಿದೆ. ಕೂಡಲೇ ಅಭಾವದ ಗ್ರಾಮಗಳಿಗೆ ನೀರು ಪೂರೈಕೆ ಅಗಬೇಕೆಂದು ಒತ್ತಾಯಿಸಿದರು.

ಮಳೆ ಬಾರದೇ ಕೆರೆಕಟ್ಟೆಗಳಿಗೆ ಬತ್ತಿ ಹೋಗಿವೆ. 1000 ಅಡಿ ಕೊರೆಯಿಸಿದರೂ ನೀರು ಸಿಗದೇ ಸಾರ್ವಜನಿಕರಿಗೆ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ. ಪ್ರಾಣಿ ಪಕ್ಷಗಳಿಗೂ ಧನ ಕರುಗಳು ಸಹ ಕುಡಿಯಲು ನೀರು ಸಿಗುತ್ತಿಲ್ಲ. ತಾಲೂಕಿನ ಕನ್ನಮೇಡಿ, ಪೆಮ್ಮನಹಳ್ಳಿ, ಯರಪಾಳ್ಯ ಬ್ಯಾಡನೂರು, ಬಿ ದೊಡ್ಡಪಟ್ಟಿ ಚೆನ್ನಸಾಗರದಹಟ್ಟಿ ಸಂತೆಬಂಡೆ, ಗಿಡ್ಡಯ್ಯನರೊಪ್ಪ ಕೃಷ್ಣಗಿರಿ ಆಲದಮರದಹಟ್ಟಿ ಕೊಡಮಡುಗು ಟಿ.ಎನ್. ಬೆಟ್ಟ ಬಿ.ಹೊಸಹಳ್ಳಿ ಬಿ.ಕೆ.ಹಳ್ಳಿ ವೀರಮ್ಮನಹಳ್ಳಿ ನಾಗೇನಹಳ್ಳಿ ಸಾಸಲಕುಂಟೆ ಕೆ.ಹೊಸಹಳ್ಳಿ ಕರೆಕ್ಯಾತನಹಳ್ಳಿ ಕೊಂಡಾಪುರ ಚಿಕ್ಕಹಳ್ಳಿ ಇತರೆ ಗ್ರಾಮಗಳಲ್ಲಿ ಬೋರ್‌ವೆಲ್ ಬತ್ತಿ ಹೋಗಿವೆ. ಅಂತರ್‌ಜಲ ಕುಸಿತವಾಗಿ ಇನ್ನೂ ಅನೇಕ ಬೋರ್‌ವೆಲ್‌ಗಳು ನಿಂತು ಹೋಗಲಿವೆ. ಕಳೆದ 5ವರ್ಷದ ಹಿಂದೆ ಅಗಿನ ಶಾಸಕರಾಗಿದ್ದ ವೆಂಕಟರಮಣಪ್ಪ ಅವರು, ಆಂಧ್ರದ ಸಚಿವರ ಜತೆ ಚರ್ಚಿಸಿ ಇಲ್ಲಿನ ನಾಗಲಮಡಿಕೆಯ ಉತ್ತರ ಪಿನಾಕಿನಿ ಡ್ಯಾಂಗೆ ಅಂದ್ರಿನಿವಾ ಯೋಜನೆಯ ಕೃಷ್ಣ ನದಿ ನೀರು ಬಿಡಿಸಿದ್ದರು.ಆಗ ಪಟ್ಟಣದಲ್ಲಿ ನೀರಿನ ಅಭಾವವಿರಲಿಲ್ಲ. ಈಗಲೂ ಸಹ ಆಂಧ್ರ ಪ್ರದೇಶದ ರಾಪ್ತಾಡು ತಾಲೂಕಿನ ಶಾಸಕರಾದ ಪರಿಟಾಲ ಸುನೀತಮ್ಮ ಅವರ ಜತೆ ಶಾಸಕರಾದ ಎಚ್‌.ವಿ.ವೆಂಟೇಶ್ ಹಾಗೂ ಮಾಜಿ ಸಚಿವರಾದ ವೆಂಕಟರಮಣಪ್ಪ ಚರ್ಚಿಸಿ, ಉತ್ತರ ಪಿನಾಕಿನಿ ಡ್ಯಾಂಗೆ ನೀರು ಹರಿಸುವಂತೆ ಅನುಕೂಲ ಮಾಡಿಕೊಡಬೇಕು. ಶಾಸಕರು ಮತ್ತೊಮ್ಮೆ ಡಿಸಿಎಂ ಶಿವಕುಮಾರ್‌ ಅವರ ಜತೆ ಚರ್ಚಿಸಿ ಡ್ಯಾಂ ಅಳಕ್ಕೆ ಪೈಪು ಆಳವಡಿಸುವ ಮೂಲಕ ತುಂಗಭದ್ರಾ ಡ್ಯಾಂನಿಂದ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಹರಿಸಿ ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿದರು.

ರಾಜ್ಯ ರೈತ ಸಂಘ ಇಲ್ಲಿನ ಪ್ರಗತಿಪರ ಸಂಘಟನೆಯ ಮುಖಂಡರು ಬೆಂಗಳೂರುಗೆ ತೆರಳಿ ವಿಧಾನ ಸೌಧದ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಬಳಿಕ ತಾಲೂಕು ಕಚೇರಿಯ ಗ್ರೇಡ್‌ 2 ತಹಸೀಲ್ದಾರ್‌ ಪ್ರಸಾದ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಇದೇ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಬ್ಯಾಡನೂರು ಶಿವು, ಬೇಕರಿ ನಾಗರಾಜು ಕುಡಿಯುವ ನೀರಿನ ಅಭಾವ ಕುರಿತು ಮಾತನಾಡಿದರು. ರೈತ ಮುಖಂಡರಾದ ಹನುಮಂತರಾಯಪ್ಪ ನಲಿಗಾನಹಳ್ಳಿ ಮಂಜುನಾಥ್‌, ಪೂಜಾರಿ ಚಿತ್ತಯ್ಯ, ರಾಮಾಂಜಿನಪ್ಪ, ಸದಾಶಿವಪ್ಪ, ನಡುಪನ್ನ, ಲಕ್ಷ್ಮೀನಾಯಕ್‌ ನಾರಾಯಣನಾಯಕ್, ನಡಪನ್ನ, ಗುಡಿಪಲ್ಲಪ್ಪ, ಈರಣ್ಣ, ಕೃಷ್ಣಮೂರ್ತಿ ಸಿದ್ದಪ್ಪ, ಕೃಷ್ಣಗಿರಿ ಶಿವಕುಮಾರ್‌, ನಿಡಗಲ್‌ ಹನುಮಂತರಾಯಪ್ಪ ಅನೇಕ ಮಂದಿ ರೈತರು ಪ್ರತಿಭಟನೆಯಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭತ್ತದ ಬೆಳೆ ರಕ್ಷಣೆಗೆ ನೀರು ಹರಿಸಲು ರವೀಂದ್ರ ಶ್ರೀಕಂಠಯ್ಯ ಆಗ್ರಹ
ನೀರಿದ್ದಾಗ ತಾತ್ಸಾರ, ಬರವಿದ್ದಾಗ ಲೆಕ್ಕಾಚಾರ..!