ಕನ್ನಡಪ್ರಭ ವಾರ್ತೆ ಯಾದಗಿರಿ
ಆ.10 ಸೋಮವಾರದಂದು ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀಪೀಠದ 65ನೇ ಜಗದ್ಗುರು ಬನ್ನಿಬಸವೇಶ್ವರರ ಕರ್ತೃ ಗದ್ದುಗೆಗೆ ಮಹಾಪೂಜೆ ನೆರವೇರಿಸಲಾಗುವುದು. ಅಲ್ಲಿ ಬಿ.ಎಂ.ಪಾಟೀಲ ಅವರಿಂದ ಪ್ರಸಾದ ವ್ಯವಸ್ಥೆ ಜರುಗಲಿದೆ. ನಂತರ ಮಧ್ಯಾಹ್ನ1ಕ್ಕೆ ಸಕಲ ಮಂಗಲ ವಾದ್ಯಗಳೊಂದಿಗೆ ಅಮೃತೇಶ್ವರ ಮಂದಿರದಿಂದ ಪೂಜ್ಯರ ದರ್ಶನ, ಪ್ರಸಾದ ಪಡೆದುಕೊಂಡು ವಿಶ್ವಾರಾಧ್ಯರ ಜನ್ಮಭೂಮಿ ಪಂಚಗೃಹ ತೋಪಕಟ್ಟಿ ಹಿರೇಮಠದಿಂದ ಭಕ್ತಗಣಪುರದ ಜನರ ಕಳಸ, ಕನ್ನಡಿಯೊಂದಿಗೆ ಪಾದಯಾತ್ರೆ ಸಾಗಲಿದೆ.
ನಂತರ ಪಾದಯಾತ್ರೆ ಗ್ರಾಮದ ಸೀಮಾಂತರದಲ್ಲಿ ಊರಿನ ಚನ್ನಪ್ಪ ಸಾಹು ಬಿರಾದಾರ ಅವರ ಹೊಲದಲ್ಲಿ ನಿರ್ಮಿಸಿದ ಗುರು ಮಂಟಪದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಲಿದೆ. ಅಲ್ಲಿ ಎಲ್ಲ ಭಕ್ತಗಣ ಪ್ರಸಾದ ಸ್ವೀಕರಿಸಿ ಮುಂದೆ ಹೊರಡುವ ಪಾದಯಾತ್ರೆ ಮಾರ್ಗ ಮಧ್ಯೆ ಅನೇಕ ಭಕ್ತರ ವಿಶ್ರಾಂತಿ ಕಟ್ಟೆಯಲ್ಲಿ ಪಾದಪೂಜೆ ಮುಗಿಸಿಕೊಂಡು ಅಣಬಿ ಗ್ರಾಮ ತಲುಪಲಿದೆ.ಅಣಬಿ ಗ್ರಾಮದ ಭಕ್ತರು ಪಾದಯಾತ್ರೆಯನ್ನು ಬರಮಾಡಿಕೊಂಡು ಶ್ರೀಗಳ ಪಾದಪೂಜೆ ನೆರವೇರಿಸುವುರು. ಅಣಬಿ ಹಳ್ಳದ ದಂಡೆಯಲ್ಲಿ ಚಿತ್ತಾಪುರದ ವಿಶ್ವಗಂಗಾ ಗೆಳೆಯರ ಬಳಗದಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಪಾದಯಾತ್ರೆಗಳಿಗೆ ಶ್ರೀ ವಿಶ್ವಾರಾಧ್ಯರ ಶಾಖಾಮಠದಲ್ಲಿ ಪ್ರಸಾದ ಜರುಗಲಿದೆ. ಪಾದಯಾತ್ರೆ ಸಿರವಾಳ ಗ್ರಾಮ ತಲುಪಿದ ಮೇಲೆ ಆ ಗ್ರಾಮದ ಮಾಜಿ ಶಾಸಕ ಗುರುಪಾಟೀಲ ನೇತೃತ್ವದಲ್ಲಿ ಸಾಯಿಬಣ್ಣ ಶರಣರ ಹೊಲದಲ್ಲಿ ಪ್ರಸಾದ ಜರುಗುವುದು.
ಆ.11 ಮಂಗಳವಾರಂದು 2 ನೇ ದಿನದ ಪಾದಯಾತ್ರೆ ಕನಗಾನಹಳ್ಳಿ ಮಾರ್ಗವಾಗಿ ಹೊರಟು ಊಳವಂಡಗೇರಾ ಗ್ರಾಮದ ಭಕ್ತರಿಂದ ಪಾದಪೂಜೆ ಮತ್ತು ಪ್ರಸಾದ ವ್ಯವಸ್ಥೆ ನೆರವೇರಲಿದೆ. ಅಲ್ಲಿಂದ ಸಾಗುವ ಪಾದಯಾತ್ರೆ ಬನ್ನೆಟ್ಟಿ ಗ್ರಾಮ ದಾಟಿದ ನಂತರ ಶ್ರೀವಿಶ್ವಾರಾಧ್ಯರ ದರ್ಶನ ಕಟ್ಟೆಯಲ್ಲಿ ಶಿವಲಿಂಗಪ್ಪ ಸಾಹು ಕೂಡಿ ಫರಹತಾಬಾದ್ ಹಾಗೂ ಅವರ ಬಳಗದವರು ಏರ್ಪಡಿಸುವ ಪ್ರಸಾದವನ್ನು ಎಲ್ಲ ಭಕ್ತರೊಂದಿಗೆ ಶ್ರೀಗಳು ಸೇವಿಸುವರು.
ಮಲ್ಲರೆಡ್ಡಪ್ಪ ಸಾಹು ಅರಿಕೇರಿ ಅವರ ಮನೆಯಲ್ಲಿ ಪಾದಯಾತ್ರಿಗಳು ಫಲಹಾರ ಸ್ವೀಕರಿಸಿ ಹಾಗೆ ಮುಂದೆ ಸಾಗಿ ಭೀಮರೆಡ್ಡಿ ಸಾಹುಕಾರ ಅವರು ಏರ್ಪಡಿಸುವ ಪ್ರಸಾದವನ್ನು ಸ್ವೀಕರಿಸಿ ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠವನ್ನು ತಲುಪಲಿದ್ದಾರೆ.
ಆ.12 ರಂದು ಬುಧವಾರದಂದು 3ನೇ ದಿನದ ಪಾದಯಾತ್ರೆ ಅಮಾವಾಸ್ಯೆಯ ವಿಶೇಷ ಪೂಜಾ ವಿಧಾನಗಳ ಜತೆಗೆ ಪಲ್ಲಕ್ಕಿ ಮೂರ್ತಿ ಗಂಗಾಸ್ನಾನ ನೆರವೇರಿಸಿಕೊಂಡು ತರುವಾಯ ಹೋತಪೇಟೆಯ ಮಲ್ಲರೆಡ್ಡಿಗೌಡ, ಶಹಾಪೂರದ ಮರೆಪ್ಪ ಹೈಯ್ಯಾಳಕರ್ ಏರ್ಪಡಿಸುವ ಮಧ್ಯಾಹ್ನದ ಪ್ರಸಾದ ಸ್ವೀಕರಿಸಿ ಪಾದಯಾತ್ರೆಯು ಠಾಣಗುಂದಿ ತಲುಪಲಿದೆ.
ಸಂಜೆ 6ಕ್ಕೆ ಸಮಸ್ತ ಭಕ್ತರು ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರುಗಳು, ರಾಜಕೀಯ ಮುಖಂಡರು, ಸಾಹಿತಿ, ಕಲಾವಿದರು ಪಾದಯಾತ್ರೆಯನ್ನು ಭಕ್ತಿ ಸಡಗರಗಳಿಂದ ಬರಮಾಡಿಕೊಂಡು ಪಾದಗಟ್ಟೆಯಿಂದ ಶ್ರೀ ವಿಶ್ವಾರಾಧ್ಯರ ದೇವಸ್ಥಾನದ ವರೆಗೆ ವಿಶೇಷ ಮೆರವಣಿಗೆಯಲ್ಲಿ ಕರೆದೊಯ್ಯಲಿದ್ದಾರೆ.
ಕರ್ನಾಟಕ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರಸೇರಿದಂತೆ ಲಕ್ಷಾಂತರ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯ ಸಂದರ್ಭ ಸಂಬಂಧಪಟ್ಟ ಆರಕ್ಷಕ ಸಿಬ್ಬಂದಿ, ಆರೋಗ್ಯ, ಜೆಸ್ಕಾಂ ಇಲಾಖೆ ಮುಂತಾದವರು ಪಾದಯಾತ್ರೆ ಸುಗಮವಾಗಿ ನೆರವೇರಲು ಸಹಕರಿಸುವರು. ಸಮಸ್ತ ಭಕ್ತಾದಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಹೇಶ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6ವೈಡಿಆರ್8 :
ಡಾ.ಗಂಗಾಧರ ಮಹಾಸ್ವಾಮಿ.