ದೇಶಕ್ಕೆ ಅಬ್ದುಲ್ ಕಲಾಂ ನೀಡಿದ ಕೊಡುಗೆ ಅಪಾರ

KannadaprabhaNewsNetwork |  
Published : Oct 16, 2024, 12:31 AM IST
1. ಕಂಪ್ಲಿಯಲ್ಲಿ ಡಾ ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿ ಆಚರಿಸಲಾಯಿತು.2.  ಕಂಪ್ಲಿಯಲ್ಲಿ ಡಾ ಎಪಿಜೆ ಅಬ್ದುಲ್ ಕಲಾಂ ಜಯಂತಿಯ ಅಂಗವಾಗಿ ವಿಜ್ಞಾನ ಶಿಕ್ಷಕರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಸ್ವದೇಶಿ ನಿರ್ಮಿತ ಕ್ಷಿಪಣಿ ಅಗ್ನಿ ಮತ್ತು ಪೃಥ್ವಿಗಳ ಅಭಿವೃದ್ಧಿ ಮತ್ತು ಕಾರ್ಯನಿರ್ವಹಣೆಯಿಂದ ಭಾರತದ ಕ್ಷಿಪಣಿ ಮನುಷ್ಯ ಎಂಬ ಬಿರುದು ಪಡೆದಿದೆ.

ಕಂಪ್ಲಿ: ಮಕ್ಕಳ ನೆಚ್ಚಿನ ಮೇಷ್ಟ್ರು ಆಗಿ, ಜನರ ನೆಚ್ಚಿನ ರಾಷ್ಟ್ರಪತಿಯಾಗಿ, ಭಾರತದ ಪ್ರಮುಖ ಕ್ಷಿಪಣಿ ಅಭಿವೃದ್ಧಿ ಪಡಿಸಿದ ವಿಜ್ಞಾನಿಯಾಗಿ ದಿ. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಹಲವು ಸ್ತರಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ದೇಶದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ರೀ ಪ್ರಭುಸ್ವಾಮಿಗಳ ಅನುದಾನಿತ ಕಲ್ಮಠ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಡಿ.ಜಿ.ಎಂ.ನಜೀರ್ ಅಹ್ಮದ್ ತಿಳಿಸಿದರು.

ಪಟ್ಟಣದ ಮದರ್ ತೆರೇಸಾ ಪಿಯು ಹಾಗೂ ವಿನೂತನ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ವತಿಯಿಂದ ಅಬ್ದುಲ್ ಕಲಾಂ ಅವರ ಜಯಂತಿಯ ಅಂಗವಾಗಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟೀಯ ವಿದ್ಯಾರ್ಥಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಾಹ್ಯಾಕಾಶ ವಿಜ್ಞಾನಿಯಾಗಿ ಅಬ್ದುಲ್ ಕಲಾಂ ಭಾರತದ ಎರಡು ಪ್ರಮುಖ ಅಂತರಿಕ್ಷ ಸಂಶೋಧನಾ ಸಂಸ್ಥೆಗಳಾದ ಡಿಆರ್ ಡಿಒ ಮತ್ತು ಇಸ್ರೊದಲ್ಲಿ ತಮ್ಮ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ. ಸ್ವದೇಶಿ ನಿರ್ಮಿತ ಕ್ಷಿಪಣಿ ಅಗ್ನಿ ಮತ್ತು ಪೃಥ್ವಿಗಳ ಅಭಿವೃದ್ಧಿ ಮತ್ತು ಕಾರ್ಯನಿರ್ವಹಣೆಯಿಂದ ಭಾರತದ ಕ್ಷಿಪಣಿ ಮನುಷ್ಯ ಎಂಬ ಬಿರುದು ಪಡೆದಿದ್ದು ಮಾತ್ರವಲ್ಲದೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಲವು ವಿಷಯಗಳಲ್ಲಿ ಕಲಾಂ ಕೊಡುಗೆ ನೀಡಿದ್ದಾರೆ ಎಂದರು.

ವಿಜ್ಞಾನ ಶಿಕ್ಷಕ ವಿ.ವಸಂತಕುಮಾರ್ ಮಾತನಾಡಿ, ಡಾ.ಅಬ್ದುಲ್‌ ಕಲಾಂ ಅವರು ಭಾರತ ಕಂಡ ಅತ್ಯುತ್ತಮ ರಾಷ್ಟ್ರಪತಿ ಎಂದು ಬಣ್ಣಿಸಿದರು. ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ ವಿಶ್ವದಲ್ಲಿಯೇ ದೇಶದ ಕೀರ್ತಿಯನ್ನು ಹೆಚ್ಚಿಸಿದ ಧೀಮಂತ ನಾಯಕ. ಇಂತಹ ವ್ಯಕ್ತಿಗೆ ಭಾರತ ರತ್ನ ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ. ಮಕ್ಕಳ ಒಡನಾಡಿ ಎಂಬ ಹೆಗ್ಗಳಿಕೆಯನ್ನು ಗಳಿಸಿದ ಇವರು ಮಕ್ಕಳ ಬಗ್ಗೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದರು ಎಂದರು.

ಶಿಕ್ಷಕರಾದ ಸಿದ್ದಲಿಂಗೇಶ್ವರ ಗದುಗಿನ ಮಾತನಾಡಿ ಅಬ್ದುಲ್ ಕಲಾಂ ಅವರು 21ನೇ ಶತಮಾನದ ಸಮಕ್ಷ ಮತ್ತು ಸಮರ್ಥ ಭಾರತದ ಕನಸನ್ನು ಕಂಡವರು ಮತ್ತು ದೇಶಕ್ಕಾಗಿ ವಿಶಿಷ್ಟ ಕೊಡುಗೆಯನ್ನು ನೀಡಿದವರಾಗಿದ್ದಾರೆ. ಅವರ ಆದರ್ಶ ಜೀವನ ಸದಾ ಪ್ರೇರಣೆಯಾಗಿದ್ದು ಪ್ರತಿಯೊಬ್ಬರೂ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಇದೆ ವೇಳೆ ಪಟ್ಟಣದ ವಿವಿಧ ಶಾಲೆಗಳ ವಿಜ್ಞಾನ ಶಿಕ್ಷಕರುಗಳಾದ ಡಾ. ಬಿ.ಸುನಿಲ್, ಸಿದ್ದಲಿಂಗೇಶ್ವರ ಗದುಗಿನ, ವಿ.ವಸಂತ ಕುಮಾರ್, ಕೆ.ವಿಷ್ಣು, ಡಿ.ಜಿ.ಎಂ.ನಜೀರ್ ಅಹ್ಮದ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ಉಪಾಧ್ಯಕ್ಷ ಬಿ ರಸೂಲ್ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಜಿ. ಮಹಾ ಬಲೇಶ್ವರ, ಟ್ರಸ್ಟ್ ನ ಸ್ಥಾಪಕ ಸಂಚಾಲಕರಾದ ಬಡಿಗೇರ್ ಜಿಲಾನಸಾಬ್, ಪ್ರಮುಖರಾದ ಡಾ.ರೆಹಮಾನ್, ಜಿಲಾನ್ , ಎನ್ ಮೌಲಾಹುಸೇನ್ ಸೇರಿ ವಿದ್ಯಾರ್ಥಿಗಳಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ