ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕರ್ನಾಟಕ ರಾಜ್ಯದಿಂದ ಪ್ರಥಮವಾಗಿ ಕಾಲು ನಡಿಗೆ ಮೂಲಕ ಮುಸ್ಲಿಮರ ಪವಿತ್ರ ನಗರಿ ಮೆಕ್ಕಾಗೆ ತೆರಳಿರುವ ಉಪ್ಪಿನಂಗಡಿಯ ಪೆರಿಯಡ್ಕದ ಅಬ್ದುಲ್ ಖಲೀಲ್ ಯಾ ನೌಶಾದ್ ಹಜ್ ವಿಧಿ ಪೂರೈಸಿದ್ದಾರೆ. ಜೂ.೨೦ರಂದು ತಾಯ್ನಾಡಿಗೆ ಆಗಮಿಸಲಿದ್ದು, ಅವರಿಗೆ ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಮತ್ತು ಉಪ್ಪಿನಂಗಡಿ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಕೆ.ಪಿ. ಬಶೀರ್ ತಿಳಿಸಿದರು.ಉಪ್ಪಿನಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೆರಿಯಡ್ಕ ಮಸೀದಿ ಜಮಾಅತ್‌ನ ಅಬ್ದುಲ್ ಖಲೀಲ್ ೨೦೨೩ ಜನವರಿ ೩೦ರಂದು ಮಸೀದಿಯಲ್ಲಿ ಪ್ರಾರ್ಥನೆ ನೆರವೇರಿಸಿ ಕಾಲ್ನಾಡಿಗೆಯಲ್ಲಿ ಹೊರಟಿದ್ದರು. ಅವರು ನಡಿಗೆ ಮೂಲಕ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಪಂಜಾಬ್ ದಾಟಿ ಪಾಕಿಸ್ತಾನದ ಗಡಿ ವಾಘಾ ಮೂಲಕ ಪಾಕಿಸ್ತಾನ ಪ್ರವೇಶ ಮಾಡಿದ್ದರು.ಆ ಬಳಿಕ ಓಮನ್, ಯು.ಎ.ಇ., ಸೌದಿ ಅರೇಬಿಯಾದ ಮೂಲಕ ಒಟ್ಟು ಸುಮಾರು ೮೧೩೦ ಕಿಲೋ ಮೀಟರ್ ದೂರವನ್ನು ನಡಿಗೆ ಮೂಲಕ ೧ ವರ್ಷ ೨ ದಿವಸದಲ್ಲಿ ಕ್ರಮಿಸಿ ೨೦೨೪ ಫೆಬ್ರವರಿ ೮ರಂದು ಮೆಕ್ಕಾ ನಗರ ಪ್ರವೇಶಿಸಿದ್ದರು. ಅಲ್ಲಿ ೪ ತಿಂಗಳು ೨೬ ದಿವಸ ಅಲ್ಲಿಯೇ ಇದ್ದು, ಜೂ. ೧೬ರಂದು ಪವಿತ್ರ ಹಜ್ ಕರ್ಮವನ್ನು ಮುಗಿಸಿರುತ್ತಾರೆ. ಜೂ. ೧೯ರಂದು ರಾತ್ರಿ ಅಲ್ಲಿಂದ ಹೊರಟು ಜೂ. ೨೦ರಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ ಎಂದು ಕೆ.ಪಿ. ಬಶೀರ್ ವಿವರಿಸಿದರು.ಅಬ್ದುಲ್ ಖಲೀಲ್ ಆರ್ಥಿಕವಾಗಿ ಸಬಲರಾಗಿಲ್ಲ. ಅವರು ನಡಿಗೆ ಮೂಲಕ ಸಾಗಿದ ಪ್ರದೇಶಗಳಲ್ಲೆಲ್ಲ ಅಲ್ಲಿನ ಜನ ಜಾತಿ, ಧರ್ಮವನ್ನು ಲೆಕ್ಕಿಸದೆ ಅವರಿಗೆ ಅಭೂತ ಪೂರ್ವವಾದ ಸಹಕಾರ ನೀಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ಉಪ್ಪಿನಂಗಡಿ ಕ್ಲಸ್ಟರ್ ಕಾರ್ಯದರ್ಶಿ ಇಸ್ಮಾಯಿಲ್ ತಂಙಳ್, ಪೆರಿಯಡ್ಕ ಘಟಕದ ಅಧ್ಯಕ್ಷ ಶರೀಫ್, ಆತೂರು ಕ್ಲಸ್ಟರ್ ಅಧ್ಯಕ್ಷ ಸಿದ್ದಿಕ್ ಎಸ್.ಕೆ., ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಸದಸ್ಯ ಅಬ್ದುಲ್ ರಹಿಮಾನ್, ನೌಫಲ್ ಇದ್ದರು.