ಕನ್ನಡಪ್ರಭ ವಾರ್ತೆ ಮಾಲೂರು
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್, ರಾಜ್ಯದಲ್ಲಿ ಆನ್‌ಲೈನ್ ರಮ್ಮಿ ಬೆಟ್ಟಿಂಗ್ ಗೇಮ್ ದಂಧೆಯನ್ನು ರದ್ದು ಪಡಿಸಲು ಕಳೆದ ಎರಡು ತಿಂಗಳಿಂದ ತಾಲೂಕು ಕೇಂದ್ರ ಜಿಲ್ಲಾ ಕೇಂದ್ರಗಳಲ್ಲಿ ನಮ್ಮ ಕರ್ನಾಟಕ ಸೇನೆಯು ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದರು.
ನಮ್ಮ ನಡಿಗೆ ಬೆಳಗಾವಿ ಕಡೆಗೆಸಂಘಟನೆಯ ಜಿಲ್ಲಾಧ್ಯಕ್ಷ ಎಸ್ ಎಂ ರಾಜು ಮಾತನಾಡಿ, ರಮ್ಮಿ ಗೇಮ್ ರದ್ದುಪಡಿಸುವಂತೆ ಒತ್ತಾಯಿಸಲು ‘ನಮ್ಮ ನಡೆ ಬೆಳಗಾವಿ ಕಡೆಗೆ’ ಎಂಬ ಶೀರ್ಷಿಕೆಯಡಿ ತೆರಳುತ್ತಿದ್ದು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಈಗಾಗಲೇ ಆಂಧ್ರ ಪ್ರದೇಶ, ತಮಿಳುನಾಡು ಕೇರಳ ರಾಜ್ಯಗಳಲ್ಲಿ ರಮ್ಮಿ ಗೇಮ್ ರದ್ದು ಪಡಿಸಿದ್ದು, ಅದೇ ರೀತಿ ರಾಜ್ಯದಲ್ಲಿಯೂ ಸಹ ಮುಖ್ಯಮಂತ್ರಿಗಳು ರಮ್ಮಿ ಗೇಮ್ ಅನ್ನು ರದ್ದುಪಡಿಸುವ ವಿಶ್ವಾಸವಿದೆ ಎಂದರು.
ಪಟ್ಟಣದ ಮುಖ್ಯ ರಸ್ತೆಯ ಮಾರಿಕಾಂಬ ದ್ವಾರದಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಇದೇ ಭಾನುವಾರ ನಮ್ಮ ಕರ್ನಾಟಕ ಸೇನೆಯು ಕಾರ್ಯಕರ್ತರು ಬೆಳಗಾವಿಗೆ ತೆರಳುತ್ತಿರುವುದಾಗಿ ತಿಳಿಸಿದರು.ನಮ್ಮ ಕರ್ನಾಟಕ ಸೇನೆಯ ಕೊಡೂರ್ ಗೋಪಾಲ್, ಆಟೋ ಘಟಕದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ತಾಲೂಕು ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಚಿ ಶಾಮೇಗೌಡ, ಸಂಘಟನಾ ಕಾರ್ಯದರ್ಶಿ ಶ್ರೀನಾಥ್, ಕಸಬಾ ಹೋಬಳಿ ಅಧ್ಯಕ್ಷ ಸುಬ್ರಮಣಿ, ಕೋಲಾರ ಯುವ ಘಟಕದ ಆಂಜಿ, ಇನ್ನಿತರರು ಹಾಜರಿದ್ದರು.