ಗರ್ಭಪಾತ ಮಾಡಿಸಿಕೊಂಡ ಮಹಿಳೆ ಸಾವು: ಮೂವರ ಸೆರೆ

KannadaprabhaNewsNetwork | Updated : May 30 2024, 12:54 AM IST

ಸಾರಾಂಶ

ಮಹಾಲಿಂಗಪುರ ನೈಕಲಿ ವೈದ್ಯೆಯ ಎಡವಟ್ಟಿನಿಂದಾಗಿ ಮಹಾರಾಷ್ಟ್ರ ಮೂಲದ ಮಹಿಳೆ ಅಸುನೀಗಿದ್ದಾಳೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಈಗಾಗಲೇ ತನಗೆ ಎರಡು ಹೆಣ್ಣು ಮಕ್ಕಳಿದ್ದು, ಮೂರನೇ ಮಗು ಕೂಡ ಹೆಣ್ಣೆಂದು ತಿಳಿದ ಮಹಾರಾಷ್ಟ್ರ ಮೂಲದ ಮಹಿಳೆಯೊಬ್ಬಳು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಸೋಮವಾರ ಗರ್ಭಪಾತ ಮಾಡಿಸಿಕೊಂಡು ಅಸುನೀಗಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಇನ್ನುಳಿದ ಐದು ಜನರ ವಿರುದ್ಧ ಮಹಾಲಿಂಗಪುರ ಠಾಣೆಯಲ್ಲಿ ಬುಧವಾರ ಭ್ರೂಣ ಹತ್ಯೆ ಮತ್ತು ನರಹತ್ಯೆ ಪ್ರಕರಣ ದಾಖಲಿಸಲಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹಾತಕಲಂಗಡ ತಾಲೂಕು ಆಳತೆ ಗ್ರಾಮದ ಸೋನಾಲಿ ಸಚಿನ್ ಕದಂ (32) ಮೃತಪಟ್ಟ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರದ ಕವಿತಾ ಬಾಡನವರ, ಮಧ್ಯವರ್ತಿಯಾಗಿದ್ದ ಮಾರುತಿ ಬಾಬಸೋ ಖರಾತ್‌ ಮತ್ತು ವಿಜಯ್ ಗೌಳಿ (ಮೃತಳ ಸಂಬಂಧಿ)ಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏನಿದು ಘಟನೆ?: ಮಹಾಲಿಂಗಪುರದ ಆಸ್ಪತ್ರೆಯೊಂದರ ಆಯಾ ಆಗಿ ಕೆಲಸ ಮಾಡುತ್ತಿದ್ದ, ನಕಲಿ ವೈದ್ಯೆ ಕವಿತಾ ಬಾಡನವರ ಯಾವುದೇ ಮುಂಜಾಗ್ರತಾ ತೆಗೆದುಕೊಳ್ಳದೆ, ತಮ್ಮ ಮನೆಯಲ್ಲಿ ಸೋನಾಲಿಗೆ ಗರ್ಭಪಾತ ಮಾಡಿಸಿದ್ದಾಳೆ. ನಂತರ ಸೋನಾಲಿಗೆ ಹೆಚ್ಚಿನ ರಕ್ತ ಸ್ರಾವವಾಗಿದೆ. ಈ ವೇಳೆ ಆಕೆಗೆ ಪ್ರಜ್ಞೆ ಕೂಡ ತಪ್ಪಿತ್ತು. ಬಳಿಕ ಪರಿಸ್ಥಿತಿ ಕೈ ಮೀರುವ ಹಂತದಲ್ಲಿದ್ದಾಗ ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಷ್ಟರಲ್ಲಿ ಮಾರ್ಗ ಮಧ್ಯೆ ಕಾರಿನಲ್ಲಿಯೇ ಸೋನಾಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಸೋನಾಲಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೂರನೇಯ ಬಾರಿಗೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸೋನಾಲಿ, ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಯಲ್ಲಿ ಸೋನೋಗ್ರಾಫಿ ಮಾಡಿಸಿದಾಗ ಹೊಟ್ಟೆಯಲ್ಲಿ ಹೆಣ್ಣುಮಗು ಇರುವುದು ಗೊತ್ತಾಗಿದೆ. ಅದರಂತೆ ತನ್ನ ಸಂಬಂಧಿ ವಿಜಯ್‌ ಗವಳಿ ಜತೆಗೆ ಮಧ್ಯವರ್ತಿಯಾಗಿದ್ದ ಮಾರುತಿ ಕರವಾಡ ಜತೆಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ಬಂದಿದ್ದರು. ಆಗ ಮಹಾಲಿಂಗಪುರದ ನರ್ಸ್‌ ಕವಿತಾ ಮೂಲಕ ₹40 ಸಾವಿರಗಳಿಗೆ ಗರ್ಭಪಾತ ಮಾಡಿಸಲಾಗಿದೆ. ನಂತರ ಪರಿಸ್ಥಿತಿ ಕೈಮೀರಿದ್ದು, ಸ್ಥಳೀಯ ಆಸ್ಪತ್ರೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿಯೇ ಸೋನಾಲಿ ಮೃತಪಟ್ಟಿದ್ದಾಳೆ.

2022 ರಲ್ಲಿ ಇದೇ ವಿಚಾರಕ್ಕೆ ಕವಿತಾ ಮೇಲೆಯೂ ದೂರು ದಾಖಲಾಗಿತ್ತು. ಇದು ಕೂಡ ಈಗ ತನಿಖೆಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share this article