ಅಂಕೋಲಾ: ಈ ತಿಂಗಳ ಅಂತ್ಯದೊಳಗಾಗಿ ಗ್ರಾಪಂ ವ್ಯಾಪ್ತಿಯ ಎಲ್ಲ ಕುಡಿಯುವ ನೀರಿನ ಮೇಲ್ತೊಟ್ಟಿಗಳನ್ನು ಕಡ್ಡಾಯವಾಗಿ ಶುಚಿಗೊಳಿಸಿ, ಜಿಯೋ ಟ್ಯಾಗ್ ಛಾಯಾಚಿತ್ರಗಳೊಂದಿಗೆ ವರದಿ ಸಲ್ಲಿಸಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಎಂ. ಸೂಚನೆ ನೀಡಿದರು.
ನರೇಗಾ ಯೋಜನಗೆ ಸಂಬಂಧಿಸಿದಂತೆ ಮಳೆಗಾಲದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಾನವ ದಿನಗಳ ಸೃಜನೆ ಕಷ್ಟವಾದ್ದರಿಂದ ಮಳೆ ಆರಂಭವಾಗುವ ಮೊದಲೇ ನಿಗದಿತ ಗುರಿ ಸಾಧಿಸಲು ಕ್ರಮವಹಿಸಬೇಕು. ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕು. ಗ್ರಾಪಂ ಕಟ್ಟಡ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಳೆ ನೀರು ಕೊಯ್ಲು ಘಟಕ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದ ಅವರು, ವಸತಿ, ಎಸ್‌ಬಿಎಂ, 15ನೇ ಹಣಕಾಸು, ಮುಖ್ಯಮಂತ್ರಿ ಗ್ರಾಮ ವಿಕಸನ, ಗ್ರಂಥಾಲಯ, ಎಸ್ಕ್ರೋ ಬಿಲ್ ಸೇರಿದಂತೆ ವಿವಿಧ ಪ್ರಮುಖ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ತಾಪಂ ಸಹಾಯಕ ಲೆಕ್ಕಾಧಿಕಾರಿ ಶ್ರೀಮತಿ ನಾಯ್ಕ, ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಇದ್ದರು.