ಅಧಿಕಾರಿಗಳ ಗೈರು: ಬಿ.ಕಣಬೂರು ಗ್ರಾಮ ಸಭೆ ಮುಂದೂಡಿಕೆ

KannadaprabhaNewsNetwork |  
Published : Nov 18, 2025, 12:02 AM IST
೧೭ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂನಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಅಧ್ಯಕ್ಷ ರವಿಚಂದ್ರ ಮಾತನಾಡಿದರು. ಎ.ಕೆ.ಪಾಟೀಲ್, ರಂಜಿತಾ, ಚಂದ್ರಮ್ಮ, ಕಾಶಪ್ಪ, ರಾಮಪ್ಪ ಮತ್ತಿತರರು ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಪಟ್ಟಣದ ಬಿ.ಕಣಬೂರು ಗ್ರಾಪಂನಲ್ಲಿ ಸೋಮವಾರ ಅಧ್ಯಕ್ಷ ರವಿಚಂದ್ರ ಅಧ್ಯಕ್ಷತೆಯಲ್ಲಿ ಕರೆದಿದ್ದ ಗ್ರಾಮ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರಾಗಿದ್ದನ್ನು ಖಂಡಿಸಿ ಗ್ರಾಮಸ್ಥರು ಸಭೆ ನಡೆಸದಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಯಿತು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ಬಿ.ಕಣಬೂರು ಗ್ರಾಪಂನಲ್ಲಿ ಸೋಮವಾರ ಅಧ್ಯಕ್ಷ ರವಿಚಂದ್ರ ಅಧ್ಯಕ್ಷತೆಯಲ್ಲಿ ಕರೆದಿದ್ದ ಗ್ರಾಮ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರಾಗಿದ್ದನ್ನು ಖಂಡಿಸಿ ಗ್ರಾಮಸ್ಥರು ಸಭೆ ನಡೆಸದಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಯಿತು.ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಕಳೆದ 15 ದಿನಗಳ ಹಿಂದೆಯೇ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಗ್ರಾಮ ಸಭೆ ನಡೆಸುವ ಕುರಿತು ಮಾಹಿತಿ ನೀಡಿದ್ದು, ಕೆಲವು ಇಲಾಖೆ ಅಧಿಕಾರಿಗಳು ಮಾತ್ರ ಬಂದಿದ್ದಾರೆ. ಗ್ರಾಮಸ್ಥರು ಸಭೆ ನಡೆಸಲು ಅನುಮತಿ ನೀಡಿದರೆ ಸಭೆ ನಡೆಸಿ ಅಹವಾಲು ಸ್ವೀಕರಿಸಲಾಗುವುದು. ಗ್ರಾಮಸ್ಥರು ಬೇಡ ಎಂದು ತಿಳಿಸಿದರೆ ಸಭೆ ಮುಂದೂಡಿ ಮತ್ತೊಂದು ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.ಗ್ರಾಪಂ ಸದಸ್ಯ ಬಿ.ಕೆ.ಮಧುಸೂದನ್ ಮಾತನಾಡಿ, ಸಭೆಗೆ ಅಧಿಕಾರಿಗಳು ಬರದಿದ್ದರೆ ಗ್ರಾಮಸ್ಥರ ಸಮಸ್ಯೆ, ಅಹವಾಲು ಗಳನ್ನು ಸಲ್ಲಿಸುವುದು ಯಾರಿಗೆ? ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದು, ಬಿಪಿಎಲ್ ಪಡಿತರ ಚೀಟಿ ಸಮಸ್ಯೆ, ಅರಣ್ಯ ಇಲಾಖೆ, ಮೆಸ್ಕಾಂನ ವಿದ್ಯುತ್ ಸಂಬಂಧಿತ ಸಮಸ್ಯೆಗಳಿವೆ. ಇವುಗಳಿಗೆ ನಾವು ಯಾರ ಬಳಿ ಪರಿಹಾರ ಪಡೆಯುವುದು. ಆದ್ದರಿಂದ ಅಧಿಕಾರಿಗಳು ಬರುವವರೆಗೂ ಸಭೆ ನಡೆಸುವುದು ಬೇಡ. ಸರ್ಕಾರ ಹಾಗೂ ಶಾಸಕರೇ ನಮ್ಮವರೇ ಇದ್ದರೂ ಸಹ ಅಧಿಕಾರಿಗಳು ಗ್ರಾಮಸಭೆಗೆ ಸ್ಪಂದಿಸಿಲ್ಲ. ತಾಪಂ ಇಒ ಸಭೆಗೆ ಕಡ್ಡಾಯವಾಗಿ ಬರಬೇಕು. ಆದ್ದರಿಂದ ಇನ್ನೊಂದು ದಿನಾಂಕ ನಿಗದಿಗೊಳಿಸಿ ಈ ಸಭೆ ರದ್ದುಗೊಳಿಸಿ ಎಂದು ಒತ್ತಾಯಿಸಿದರು.

ನಾಗರಿಕ ವೇದಿಕೆ ಹಿರಿಯಣ್ಣ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮಸಭೆ ನಡೆಸುವುದು ಗ್ರಾಮಸ್ಥರ ಹಕ್ಕಾಗಿದೆ. ಆದರೆ ಅಧಿಕಾರಿಗಳು ಸಭೆಗೆ ಬಾರದೆ ನಿರ್ಲಕ್ಷ್ಯ ತಾಳಿದ್ದಾರೆ. ಸರ್ಕಾರ ಗ್ರಾಮಸಭೆ ರೂಪಿಸಿರುವುದೇ ಜನರ ಸಮಸ್ಯೆ ಆಲಿಸಲು. ಗ್ರಾಮಸ್ಥರ ಸಮಸ್ಯೆಗಳನ್ನು ಇಲ್ಲಿ ಆಲಿಸಿ ಅದರ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಅಧಿಕಾರಿಗಳೇ ಸಭೆಗೆ ಬಾರದಿದ್ದರೆ ಸಮಸ್ಯೆಗೆ ಪರಿಹಾರ ಕೈಗೊಳ್ಳುವುದು ಹೇಗೆ? ಸದ್ಯದಲ್ಲಿ ಗ್ರಾಪಂ ಚುನಾವಣೆ ಎದುರಾ ಗಲಿದ್ದು, ಈಗ ಸಭೆ ನಡೆಸದಿದ್ದರೆ ಮತ್ತೆ ಸಭೆ ನಡೆಸಲು ಕಾಯಬೇಕಾಗುತ್ತದೆ. ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸಭೆ ನಡೆದು 3 ವರ್ಷಗಳು ಕಳೆದಿವೆ. ನಮ್ಮ ಕೆಲವು ಸಮಸ್ಯೆ, ಅಭಿವೃದ್ಧಿ ಕಾರ್ಯಗಳಿಗೆ ಗ್ರಾಪಂನವರು ಸ್ಪಂದಿಸುತ್ತಾರೆ. ಕೆಲ ವೊಂದು ಇಲಾಖಾ ವ್ಯಾಪ್ತಿಯಲ್ಲಿ ನಡೆಯಬೇಕಿದೆ. ಅದಕ್ಕೆ ಪರಿಹಾರ ಕೊಡುವುದು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮಸ್ಥ ಮೋಹನ್ ಭಂಡಾರಿ ಮಾತನಾಡಿ, ಬಾಳೆಹೊನ್ನೂರು ಪಟ್ಟಣ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಮಿತಿ ಮೀರಿದ್ದು, ಹಲವು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕ್ರಮಕೈಗೊಂಡಿಲ್ಲ. ಆದ್ದರಿಂದ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಬಂದು ಉತ್ತರ ನೀಡಬೇಕು ಅಲ್ಲಿವರೆಗೆ ಸಭೆ ನಡೆಸುವುದು ಬೇಡ ಎಂದು ಒತ್ತಾಯಿಸಿದರು. ಗ್ರಾಪಂ ನೋಡಲ್ ಅಧಿಕಾರಿ ಎ.ಕೆ.ಪಾಟೀಲ್ ಮಾತನಾಡಿ, ಗ್ರಾಮಸಭೆಗೆ ಗೈರಾಗಿರುವ ಅಧಿಕಾರಿಗೆ ಪಿಡಿಒ, ತಾಪಂ ಇಓ ಮೂಲಕ ನೋಟಿಸ್ ನೀಡಿಸಬೇಕು. ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಇಓ ಮೂಲಕ ಸಭೆಯ ಸೂಚನಾ ಪತ್ರ ನೀಡಬೇಕು. ತುರ್ತು ಕಾರಣಗಳಿಂದ ಸಭೆಗೆ ಬರಲು ಸಾಧ್ಯವಿರದ ಅಧಿಕಾರಿಗಳು ಇಓ ಅನುಮತಿ ಮೂಲಕ ಮಾತ್ರ ಗೈರಾಗಬೇಕು ಎಂದು ಹೇಳಿದರು.ಪಿಡಿಓ ಕಾಶಪ್ಪ ಮಾತನಾಡಿ, ಗ್ರಾಮಸ್ಥರು ಅಭಿಪ್ರಾಯದಂತೆ ಗ್ರಾಮಸಭೆ ಮುಂದೂಡಿದ್ದು, ಮುಂದಿನ ಸಭೆ ನಡೆಯುವ ದಿನಾಂಕ ಶೀಘ್ರದಲ್ಲಿ ಪ್ರಕಟಿಸಿ ಗ್ರಾಮಸ್ಥರಿಗೆ ಪ್ರಚುರಪಡಿಸಲಾಗುವುದು ಎಂದರು.ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಗ್ರಾಪಂ ಕಾರ್ಯದರ್ಶಿ ರಾಮಪ್ಪ, ಡಿಆರ್‌ಎಫ್‌ಓ ನವೀನ್, ಗ್ರಾಮ ಆಡಳಿತಾಧಿಕಾರಿ ಸಮೀಕ್ಷಾ, ಪಶು ವೈದ್ಯ ಪರೀಕ್ಷಕಿ ನಾಗರತ್ನ, ಕೃಷಿ ಇಲಾಖೆ ಸಂಕೇತ್, ನೀರಾವರಿ ಇಲಾಖೆ ಆಕಾಶ್, ಅನುಪ್‌ಕುಮಾರ್, ಆರೋಗ್ಯ ಇಲಾಖೆ ಭಗವಾನ್, ವಿಜಯಲಕ್ಷ್ಮಿ, ಸಿಡಿಪಿಓ ಕಚೇರಿ ಮೇಲ್ವಿಚಾರಕಿ ನಳಿನಾಕ್ಷಿ ಮತ್ತಿತರರು ಹಾಜರಿದ್ದರು. ೧೭ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂನಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಅಧ್ಯಕ್ಷ ರವಿಚಂದ್ರ ಮಾತನಾಡಿದರು. ಎ.ಕೆ.ಪಾಟೀಲ್, ರಂಜಿತಾ, ಚಂದ್ರಮ್ಮ, ಕಾಶಪ್ಪ, ರಾಮಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಲ್ಲಿ ರಸ್ತೆ ಅತಿಕ್ರಮಣ ತೆರವು
ಔದ್ಯೋಗಿಕ ಕ್ಷೇತ್ರದಲ್ಲಿ ಕೌಶಲ್ಯಯುಕ್ತ ವ್ಯಕ್ತಿತ್ವ ಅಗತ್ಯ: ಶ್ರೀನಿವಾಸನ್ ವರದರಾಜನ್‌