ಕನ್ನಡಪ್ರಭ ವಾರ್ತೆ ನಾಪೋಕ್ಲು
ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿಯ 2024- 25ನೇ ಸಾಲಿನ ಗ್ರಾಮಸಭೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಗಳನ್ನು ತೆರೆದಿಟ್ಟು, ಶೀಘ್ರ ಪರಿಹರಿಸುವಂತೆ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೊಂಗೇರ ಶಿಲ್ಪಾ ಲೋಕೇಶ್ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ ಸಮ್ಮುಖದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಕಕ್ಕಬೆಯ ವಿಎಸ್ಎಸ್ಎನ್ ಸಭಾಂಗಣದಲ್ಲಿ ಗ್ರಾಮ ಸಭೆ ನಡೆಯಿತು.ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಮ್ ಕಾಮಗಾರಿ ಪ್ರಾರಂಭಿಸಿ ಮೂರು ವರ್ಷ ಆದರೂ ಪೂರ್ಣವಾಗದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು .
ಯವಕಪಾಡಿ ಗ್ರಾಮದ ಸರ್ವೆ ನಂಬರ್ 250/9 ಮತ್ತು 254ರ ಸರ್ಕಾರಿ ಜಾಗದಲ್ಲಿ ಇದ್ದ ಒತ್ತುವರಿಯನ್ನು ಯಾವುದೇ ಕಾರಣಕ್ಕೂ ಮೀಸಲು ಅರಣ್ಯಕ್ಕೆ ಸೇರಿಸಬಾರದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಮನೆಗಳನ್ನು ನಿರ್ಮಿಸಿಕೊಂಡಿರುವ ಹಾಗೂ ತೋಟಗಳನ್ನು ಮಾಡಿರುವಂತಹ ಜಾಗವನ್ನು ಯಾವುದೇ ಕಾರಣಕ್ಕೂ ಮೀಸಲು ಅರಣ್ಯಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದರು.