ಕೆ.ಆರ್.ಪೇಟೆ: ಪಟ್ಟಣದ ಜನಸಂದಣಿಯಿರುವ ಪ್ರದೇಶಗಳಿಗೆ ಹಾಗೂ ವಾರ್ಡುಗಳಿಗೆ ಪುರಸಭೆ ಆಡಳಿತಾಧಿಕಾರಿ, ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಭೇಟಿ ನೀಡಿ, ಪೌರ ಸಮಸ್ಯೆಗಳನ್ನು ಪರಿವೀಕ್ಷಣೆ ಮಾಡಿದರು.
ಪಟ್ಟಣದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಳ್ಳುವ ಗಾಡಿಗಳು ಹಾಗೂ ಗೂಡಂಗಡಿಗಳನ್ನು ನೋಡಿ ಪುರಸಭೆ ಆರೋಗ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ, ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡುತ್ತಿದ್ದ ವ್ಯಕ್ತಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು ತಳ್ಳುವ ಗಾಡಿಗಳನ್ನು ತೆರವುಗೊಳಿಸಬೇಕೆಂದು ಹೇಳಿದರು.
ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡಲು ಬಹಳ ತೊಂದರೆಯಾಗುತ್ತಿದೆ. ಆದರೂ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಮುಖ್ಯ ರಸ್ತೆಯ ಶೌಚಾಲಯದ ಕೆಳಗೆ ಮೀನಿನ ಮಾರುಕಟ್ಟೆ ಇರುವುದನ್ನು ಕಂಡ ತಕ್ಷಣ ತೆರವುಗೊಳಿಸಿ ಸೂಕ್ತ ಜಾಗವನ್ನು ಮೀನು ಮಾರುಕಟ್ಟೆಗೆ ಒದಗಿಸುವಂತೆ ಸಾರ್ವಜನಿಕರಿಗೆ ತಿಳಿಸಿದರು.ಪಟ್ಟಣದ ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಆಹಾರದ ಗುಣಮಟ್ಟದ ಜೊತೆಗೆ ಶುಚಿ ರುಚಿಯಾದ ಆಹಾರ ನಿಗಧಿತ ದರದಲ್ಲಿ ವಿತರಿಸಬೇಕು. ಗ್ರಾಹಕರ ಜೊತೆ ಸೌಜನ್ಯದಿಂದ ವ್ಯವಹರಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಉಪಾಹಾರ ಸೇವಿಸುತ್ತಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಆಹಾರ ತಯಾರಿಕೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳದಿದ್ದರೆ ಟೆಂಡರ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಕಳೆದ ಎರಡು ವರ್ಷಗಳಿಂದ ಬಾಗಿಲು ಮುಚ್ಚಲಾಗಿದ್ದ ಸಾರ್ವಜನಿಕ ಶೌಚಾಲಯದ ಬಾಗಿಲು ತೆಗಿಸಿ, ಶ್ರೀಸಾಮಾನ್ಯರಿಗೆ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳುವಂತೆ ಹಿರಿಯ ಆರೋಗ್ಯ ಪರಿವೀಕ್ಷಕ ಅಶೋಕ್ ಅವರಿಗೆ ಸೂಚನೆ ನೀಡಿದರು.ಪಟ್ಟಣದ ವಿವಿಧ ವಾರ್ಡಗಳಲ್ಲಿ ಜನರಿಗೆ ಕುಡಿಯುವ ನೀರು, ರಾತ್ರಿ ವೇಳೆಯಲ್ಲಿ ಬೀದಿ ದೀಪಗಳ ವ್ಯವಸ್ಥೆ, ಕಸ ವಿಲೇವಾರಿ ವ್ಯವಸ್ಥಿತ ನಿರ್ವಹಣೆಗೆ ತಾಕೀತು ಮಾಡಿದರು.
-------------23ಕೆಎಂಎನ್ ಡಿ13
ಕೆ.ಆರ್.ಪೇಟೆ ಪುರಸಭೆ ಆಡಳಿತಾಧಿಕಾರಿಗಳಾದ ಎಸಿ ಕೆ.ಆರ್.ಶ್ರೀನಿವಾಸ್ ಆರೋಗ್ಯ ಪರಿವೀಕ್ಷಕರೊಂದಿಗೆ ಪಟ್ಟಣದ ವಿವಿಧೆಡೆ ಪರಿಶೀಲನೆ ನಡೆಸಿದರು.