ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಮಿತ್ರ ವೃಂದ ತುಮಕೂರು ವತಿಯಿಂದ ಆಯೋಜಿಸಿದ್ದ 37ನೇ ವರ್ಷದ ಸರ್ವ ಸದಸ್ಯರ ಮಹಾಸಭೆ,ವಾರ್ಷಿಕ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಸಂಸ್ಥೆಯನ್ನು 37 ವರ್ಷಗಳ ಕಾಲ ನಡೆಸುವುದು ನಿಜಕ್ಕೂ ಒಳ್ಳೆಯ ಕೆಲಸ. ಇದರ ಹಿಂದೆ ದುಡಿದವರನ್ನು ಸ್ಮರಿಸುತ್ತಾ, ಅದನ್ನು ಮತ್ತಷ್ಟು ಬೆಳೆಸುವತ್ತ ಎಲ್ಲರೂ ಕೈಜೋಡಿಬೇಕೆಂದರು.ಜಿಲ್ಲೆಯಲ್ಲಿ ದಕ್ಷಿಣದ ಜನಸಂಖ್ಯೆಗೆ ಹೊಲಿಸಿದರೆ ಸಂಘದ ಸದಸ್ಯರಾಗಿರುವವರ ಸಂಖೆ ಕಡಿಮೆ ಇದೆ. ಇದು ಮತ್ತಷ್ಟು ವಿಸ್ತಾರಗೊಳ್ಳಬೇಕು. ದಕ್ಷಿಣ ಕನ್ನಡದ ಜನತೆ ದುಡಿಮೆಗೆ ಮೊದಲ ಅದ್ಯತೆ ನೀಡುವುದರಿಂದ ಸಂಘ- ಸಂಸ್ಥೆಗಳಲ್ಲಿ ಪಾತ್ರ ವಹಿಸುವುದು ಕಡಿಮೆ. ಹಾಗೆಂದು ದೂಷಿಸುವ ಅಗತ್ಯವಿಲ್ಲ. ಅವರನ್ನು ಒಳಗೊಳ್ಳುವಂತೆ ಸಂಘ ಬೆಳೆಯಬೇಕಿದೆ. ಒಂದು ಸ್ವಂತ ಕಟ್ಟಡವಾದರೆ ಹೆಚ್ಚಿನ ಚಟುವಟಿಕೆ ನಡೆಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸಂಘದ ಸರ್ವ ಸದಸ್ಯರು ಪ್ರಯತ್ನಿಸಬೇಕೆಂದು ಎಚ್.ಜಿ.ಚಂದ್ರಶೇಖರ್ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಮಿತ್ರ ವೃಂದದ ತುಮಕೂರು ಜಿಲ್ಲಾಧ್ಯಕ್ಷ ಅಮರನಾಥ ಶೆಟ್ಟಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ನನ್ನ ಶಕ್ತಿ ಮೀರಿ ಸಂಘವನ್ನು ಸದೃಢಗೊಳಿಸಲು ದುಡಿದಿದ್ದೇನೆ. ನನ್ನೊಂದಿಗೆ ಹಲವರು ಸಂಘದ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಸಕ್ರಿಯರಾಗಿ ಸಂಘದ ಏಳಿಗೆ ಮತ್ತು ಉನ್ನತಿಗಾಗಿ ದುಡಿಯೋಣ. 782 ಸದಸ್ಯರಿರುವ ಸಂಘ, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ಹೊಂದುವ ಗುರಿ ಇದ್ದು, ಎಲ್ಲರೂ ಧನ ಸಹಾಯ ಮಾಡಿದರೆ, ನಿವೇಶನ ಕೊಂಡು, 2-3 ಕೋಟಿ ವೆಚ್ಚದಲ್ಲಿ ಸಂಘದ ಕಟ್ಟಡ ಕಟ್ಟಬೇಕಿದೆ. ಈ ಕನಸು ಅದಷ್ಟು ಬೇಗ ನನಸು ಮಾಡುವಂತೆ ತಮ್ಮೆಲ್ಲರಲ್ಲಿ ಕೋರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ದಕ್ಷಿಣ ಕನ್ನಡ ಮಿತ್ರವೃಂದದ ಕಾರ್ಯದರ್ಶಿ ವೆಂಕಟೇಶ್, ಎಂ.ಎಸ್.ಕಾರಂತ್, ಸೇರಿ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಪಾಲ್ಗೊಂಡಿದ್ದರು. ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.