ಭಟ್ಕಳ: ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟಗಾರದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಜನಸ್ಪಂದನ ಸಭೆ ನಡೆಸಿ ಜನರ ಸಮಸ್ಯೆ ಆಲಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸರ್ಕಾರ ಸೌಲಭ್ಯ ಪ್ರಾಮಾಣಿಕವಾಗಿ ಸಿಗಬೇಕು ಎನ್ನುವುದು ನನ್ನ ಆಶಯವಾಗಿದೆ. ಸರ್ಕಾರದ ಸೌಲಭ್ಯಗಳಿಂದ ಬಡವರು ಯಾವುದೇ ಕಾರಣಕ್ಕೂ ವಂಚಿತರಾಗಬಾರದು. ಜನಸ್ಪಂದನ ಸಭೆಯಿಂದ ಜನರ ಸಂಕಷ್ಟ ತಿಳಿಯಲು ಸಹಾಯವಾಗುತ್ತದೆ. ನನ್ನ ಕ್ಷೇತ್ರವನ್ನಲ್ಲದೇ ಜಿಲ್ಲಾ ಮಟ್ಟದಲ್ಲೂ ಜನಸ್ಪಂದನ ಸಭೆ ನಡೆಸಿ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸರ್ಕಾರ ಬಡವರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಇದು ಪ್ರಾಮಾಣಿಕವಾಗಿ ಬಡವರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕೆಲಸ ಮಾಡಬೇಕು ಎಂದರು.ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರು ಮನೆ, ಸೇತುವೆ, ಬಾವಿ, ಹೊಳೆ ಕಂಟ, ಅತಿಕ್ರಮಣ ಸಕ್ರಮ, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರು.
ಸಚಿವರು ಜನಸ್ಪಂದನ ಸಭೆಯಲ್ಲಿ ಸುಮಾರು 400ಕ್ಕೂ ಅರ್ಜಿ ಸ್ವೀಕರಿಸಿದ್ದು, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.ಉಳಿದ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಡಲು ಸಚಿವರು ಆಪ್ತ ಸಹಾಯಕರಿಗೆ ಸೂಚಿಸಿದರು. ಸಭೆಯಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಸ್ತಿ ಗೊಂಡ, ಗ್ರಾಪಂ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ರಾಜು ನಾಯ್ಕ ಮುಂತಾದವರಿದ್ದರು.