ಶೃಂಗೇರಿ: ಕೆಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಲ್ಲಿ ನವ ವಿವಾಹಿತ ಅಸುನೀಗಿರುವ ದಾರುಣ ಘಟನೆ ಚಿಕ್ಕಮಗಳೂರು ಶೃಂಗೇರಿ ಸಂಪರ್ಕ ರಾಜ್ಯ ಹೆದ್ದಾರಿಯಲ್ಲಿ ಮೆಣಸೆ ಶಾಲೆ ಎದುರು ಸೋಮವಾರ ಮಧ್ಯಾಹ್ನ ಸಂಭವಿಸಿದೆ.ಕಳೆದ 5 ದಿನಗಳ ಹಿಂದಷ್ಟೆ ವಿವಾಹವಾಗಿದ್ದ ಕುಂಚೇಬೈಲು ನಿವಾಸಿ ನಾಗರಾಜ್ ಕುಲಾಲ್ (32) ಮೃತ ದುರ್ಧೈವಿ.ಕೆಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದಾಗ ಬೈಕ್ ಗೆ ಬೆಂಕಿ ತಗುಲಿ ಇಡೀ ಬೈಕ್ ಹಾಗೂ ಸವಾರ ಸುಟ್ಟು ಬೆಂಕಿಗೆ ಆಹುತಿಯಾಗಿದ್ದಾರೆ.ಚಿಕ್ಕಮಗಳೂರಿನಿಂದ ಶೃಂಗೇರಿಯತ್ತ ಬರುತ್ತಿದ್ದ ಬಸ್‌ಗೆ ಶೃಂಗೇರಿಯಿಂದ ಮೆಣಸೆಯತ್ತ ಹೋಗುತ್ತಿದ್ದ ನಾಗರಾಜ್ ಅವರ ಬೈಕ್ ಗೆ ಅಪ್ಪಳಿಸಿದ ಪರಿಣಾಮ ಬೈಕ್ ಗೆ ಬೆಂಕಿ ತಗುಲಿ ಬೈಕ್, ಸವಾರ ಇಬ್ಬರೂ ಸ್ಥಳದಲ್ಲೇ ಸುಟ್ಟುಹೋಗಿದ್ದಾರೆ. ನಾಗರಾಜ್ ಒಬ್ಬನೇ ಮಗನಾಗಿದ್ದು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.ಇನ್ನೂ ಬಸ್ ಬೈಕ್ ಗೆ ಡಿಕ್ಕಿ ಹೊಡೆದು ಸಮೀಪದಲ್ಲಿದ್ದ ಅಂಗಡಿ ಮಳಿಗೆಗೆ ನುಗ್ಗಿದೆ. ಅದೃಷ್ಟವಶಾತ್ ಅಲ್ಲಿ ಯಾವುದೇ ರೀತಿ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.ನಾಗರಾಜ್ ಕುಲಾಲ್ ವೃತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ತಂದೆಯನ್ನು ಕಳೆದುಕೊಂಡಿದ್ದ ಇವರು ಅನಾರೋಗ್ಯ ಪೀಡಿತ ತಾಯಿಯೊಂದಿಗೆ ವಾಸವಿದ್ದರು. ಇವರೊಬ್ಬರೇ ಮಗ. ಕಳೆದ 5 ದಿನಗಳ ಹಿಂದೆ ಇವರು ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಸೋಮವಾರ ಅಗತ್ಯ ಕೆಲಸಕ್ಕೆ ಶೃಂಗೇರಿಗೆ ಬಂದು ವಸ್ತುಗಳನ್ನು ಕೊಂಡು ಕುಂಚೇಬೈಲಿಗೆ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಸಾವಿನ ಸುದ್ದಿ ಯಿಂದ ವಿವಾಹ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಈ ಸ್ಥಳದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು ರಸ್ತೆ ಪಕ್ಕದಲ್ಲಿಯೇ ಶಾಲೆ ಇದೆ. ಈ ಹಿಂದೆ ಕಾರ್ ಚಾಲಕ ನಿಂತ್ರಣ ತಪ್ಪಿ ಶಾಲೆಯೆದುರು ನಿಂತಿದ್ದ ಏಳೆಂಟು ಬೈಕ್ ಗಳ ಮೇಲೆ ಹತ್ತಿಸಿ ಸರಣಿ ಅಪಘಾತ ನಡೆದಿತ್ತು. ಶಾಲಾ ಮಕ್ಕಳು ಒಳಗಿದ್ದ ಪರಿಣಾಮ ಭಾರೀ ಅವಗಡ ತಪ್ಪಿತ್ತು. ಇಲ್ಲಿ ಅತಿ ವೇಗದಿಂದ ವಾಹನಗಳು ಸಂಚರಿಸುತ್ತಿದ್ದು,ಯಾವುದೇ ಹಂಪ್ ಇಲ್ಲದ ಕಾರಣ ಅಪಾಯಕಾರಿ ವಲಯವಾಗಿದೆ. ಅತಿ ವೇಗ ನಿಯಂತ್ರಿಸಲು ಇಲ್ಲಿ ಹಂಪ್ , ಬ್ಯಾರಿಕೇಡ್ ಅಳವಡಿಸಿ ವೇಗ ಮಿತಿ ನಿಯಂತ್ರಸಿಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.26 ಶ್ರೀ ಚಿತ್ರ 4-ಶೃಂಗೇರಿ ಮೆಣಸೆಯಲ್ಲಿ ಬಸ್ ಬೈಕ್ ಡಿಕ್ಕಿ ಸಂಭವಿಸಿ,ಬಸ್ ಅಂಗಡಿ ಮಳಿಗೆಗೆ ನುಗ್ಗಿರುವುದು.