ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಾಯಣದ ಮೂಲಕ ವಾಲ್ಮೀಕಿ ಅವರು ಸಮಾಜಕ್ಕೆ ಪ್ರತಿಯೊಂದು ಪಾತ್ರದ ಸ್ಪಷ್ಟ ಆದರ್ಶಗಳನ್ನು ನೀಡಿದ್ದಾರೆ. ಮರ್ಯಾದಾ ಪುರುಷೋತ್ತಮನಾಗಿ ಒಬ್ಬ ಪುರುಷ, ಮಗ, ಮಗಳು ಹಾಗೂ ತಂದೆ ಹೇಗಿರಬೇಕು?, ಒಬ್ಬ ಆದರ್ಶ ಪತ್ನಿ, ಭ್ರಾತೃತ್ವ ಹಾಗೂ ಭಕ್ತನ ಲಕ್ಷಣಗಳೇನು ಎಂಬುದನ್ನು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ, ರಾವಣನ ಚರಿತ್ರೆಯ ಮೂಲಕ ಒಬ್ಬ ಆದರ್ಶ ತಪಸ್ವಿ ಹೇಗಿರಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ನೀಡಿದ ಮಾರ್ಗದರ್ಶನ ಮತ್ತು ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರನ್ನು ಆದಿಕವಿ ಎಂದು ಕರೆಯಲಾಗುತ್ತದೆ. ರಾಮಾಯಣ ಮಹಾಕಾವ್ಯವು ಎಲ್ಲರಿಗೂ ಒಂದು ಮೌಲ್ಯಯುತ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿಸಿಕೊಟ್ಟಿದೆ. ಜೀವನದಲ್ಲಿ ತಪ್ಪುಗಳಾಗಿದ್ದರೂ, ಅವುಗಳನ್ನು ತಿದ್ದಿಕೊಂಡು ಹೇಗೆ ಸುಧಾರಣೆ ಮಾಡಿಕೊಳ್ಳಬಹುದು ಮತ್ತು ಉತ್ತಮ ರೀತಿಯಲ್ಲಿ ಮುನ್ನಡೆಯಬಹುದು ಎಂಬ ಮಹತ್ವದ ಸಂದೇಶವನ್ನು ಇದು ನೀಡುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜೀವನ ಮತ್ತು ರಾಮಾಯಣದ ಮೂಲಕ ನಾವೆಲ್ಲರೂ ಜೀವನದ ಸರಿಯಾದ ಮಾರ್ಗದರ್ಶನವನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು.
ಯಾದಗಿರಿ ಸರಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ನಾಗಪ್ಪ ವೈ. ಮಾನ್ಯದಾರ್ ಅವರು ಮಹರ್ಷಿ ವಾಲ್ಮೀಕಿ ಜೀವನ ಮತ್ತು ಕಾವ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿದ್ದಣ್ಣ ಅಣಬಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಸರೋಜಾ ಜಿ.ಟಿ., ಯುವಜನ ಕ್ರೀಡಾ ಇಲಾಖೆ ಅಧಿಕಾರಿ ರಾಜು ಭಾವಿಹಳ್ಳಿ, ಮಿನುಗಾರಿಕೆ ಇಲಾಖೆ ಅಧಿಕಾರಿ ಶರಣ ಬಸವ, ಪಿಂಚಣಿ ಮತ್ತು ಸಂಘ ಉಳಿತಾಯ ಅಧಿಕಾರಿ ಶಂಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.