ರಾಮನಗರ: ಮಹರ್ಷಿ ವಾಲ್ಮೀಕಿ ತಮ್ಮ ಜೀವನದ ಪೂರ್ವಾಶ್ರಮದಲ್ಲಿ ಮಾಡಿದ ತಪ್ಪುಗಳ ಅರಿವಾದ ಬಳಿಕ ಸನ್ಮಾರ್ಗದಲ್ಲಿ ಜಗತ್ತಿಗೆ ಮಾದರಿ ಮಹಾ ಗ್ರಂಥ ರಾಮಾಯಣವನ್ನು ರಚಿಸಿದರು ಎಂದು ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಹೇಳಿದರು.
ರಾಮಾಯಣ ಒಂದು ಮಹಾಕಾವ್ಯ ಮಾತ್ರವಲ್ಲ, ಅದು ಮಾನವನ ಜೀವನದ ವಿವಿಧ ಮಜಲುಗಳನ್ನು ಪರಿಚಯಿಸುವ ಮಾರ್ಗದರ್ಶಕ ಗ್ರಂಥ. ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಪ್ರತಿಯೊಬ್ಬರೂ ಓದಿ ಅದರಲ್ಲಿನ ಜೀವನದ ಮೌಲ್ಯಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಾಲ್ಮೀಕಿ ರಾಮಾಯಣ ಕೇವಲ ಮಹಾಕಾವ್ಯ ಅಲ್ಲ. ಕರ್ತವ್ಯ ನಿಷ್ಠೆ, ತ್ಯಾಗ, ಸತ್ಯಸಂಧತೆ, ಸಹನೆ ಮತ್ತು ಮಾನವ ಸಂಬಂಧಗಳ ಮೌಲ್ಯಗಳನ್ನು ಅನಾವರಣಗೊಳಿಸುವ ಜೀವನ ದರ್ಶನ. ಅದರ ಪಾತ್ರಗಳು ಇಂದಿಗೂ ನೈತಿಕ ಆಯ್ಕೆಗಳ ಕುರಿತು ಚಿಂತಿಸಲು ಪ್ರೇರೇಪಿಸುತ್ತವೆ. ಇಂತಹ ಗ್ರಂಥಗಳ ಅಧ್ಯಯನದಿಂದ ಮನುಷ್ಯನಲ್ಲಿ ಜ್ಞಾನ, ವಿವೇಕ ಹಾಗೂ ನೈತಿಕ ಮೌಲ್ಯಗಳು ವೃದ್ಧಿಯಾಗುತ್ತವೆ. ದುಶ್ಚಟಗಳಿಂದ ದೂರವಿದ್ದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಬೇಕೆಂದರು. ಮನುಷ್ಯ ತನ್ನ ಜೀವನದಲ್ಲಿ ತಪ್ಪು ಮಾಡುತ್ತಿದ್ದಾನೆ ಎಂದು ಕಂಡಾಗ ವಿವೇಚನೆ ಬಳಸಿ ತಪ್ಪನ್ನು ತಿದ್ದಿಕೊಂಡು ಉತ್ತಮವಾಗಿ ಹಾಗೂ ಆದರ್ಶವಾಗುವ ರೀತಿಯಲ್ಲಿ ಮಾದರಿ ಜೀವನ ನಡೆಸಬೇಕು.ಇಲ್ಲವಾದಲ್ಲಿ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಗಳತ್ತ ಅಲೆದಾಡುತ್ತಾ ಜೀವನದ ಅಮೂಲ್ಯ ಸಮಯವನ್ನು ಕಳೆಯಬೇಕಾಗುತ್ತದೆ. ಮನುಷ್ಯರು ತಮ್ಮ ತಪ್ಪುಗಳನ್ನು ಅರಿತು, ತಿದ್ದಿಕೊಂಡು ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ಚಂದ್ರಯ್ಯ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ 2026ರಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
26ಕೆಆರ್ ಎಂಎನ್ 2.ಜೆಪಿಜಿ