ದೊಡ್ಡಮಾರ್ಗೋನಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ರೈತ ಆಹುತಿ

KannadaprabhaNewsNetwork |  
Published : Mar 04, 2024, 01:16 AM IST
೩ ಟಿವಿಕೆ ೧ - ತೋಟದಲ್ಲಿ ಬೆಂಕಿಗೆ ಆಹುತಿಯಾದ ರೈತ ಸಿದ್ದಪ್ಪ. | Kannada Prabha

ಸಾರಾಂಶ

ತೋಟದಲ್ಲಿ ಬೆಳೆದಿದ್ದ ಕಳೆ ನಾಶ ಮಾಡಲು ಬೆಂಕಿ ಹಾಕಿದ್ದ ರೈತರೋರ್ವರು ಅದೇ ಬೆಂಕಿಗೆ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತೋಟದಲ್ಲಿ ಬೆಳೆದಿದ್ದ ಕಳೆ ನಾಶ ಮಾಡಲು ಬೆಂಕಿ ಹಾಕಿದ್ದ ರೈತರೋರ್ವರು ಅದೇ ಬೆಂಕಿಗೆ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ. ತಾಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಮಾರ್ಗೋನಹಳ್ಳಿ ಗ್ರಾಮದ ರೈತ ಸಿದ್ದಯ್ಯ (೯೦) ತೆಂಗಿನ ಸಸಿಗೆ ಹತ್ತಿಕೊಂಡಿದ್ದ ಬೆಂಕಿ ನಂದಿಸುವ ವೇಳೆ ಆಕಸ್ಮಿಕವಾಗಿ ಬೆಂಕಿಯ ಅವಘಡಕ್ಕೀಡಾಗಿ ಭಾನುವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ರೈತ ಸಿದ್ದಯ್ಯ ಮಧ್ಯಾಹ್ನ ದೊಡ್ಡಮಾರ್ಗೋನಹಳ್ಳಿ ಹೊರವಲಯದ ತೋಟಕ್ಕೆ ೪ ಗಂಟೆಗೆ ತೆರಳಿದ್ದಾರೆ. ತೋಟದ ಬದುವಿನಲ್ಲಿ ಇದ್ದ ಹುಲ್ಲಿಗೆ ಬೆಂಕಿ ಹಾಕಿದ್ದಾರೆ. ಆ ಬೆಂಕಿ ಕ್ರಮೇಣ ಉರಿದುಕೊಂಡು ಬದುವಿನ ಪಕ್ಕದಲ್ಲಿದ್ದ ತೆಂಗಿನ ಸಸಿಗೆ ಹತ್ತಿಕೊಂಡಿದೆ. ತಕ್ಷಣ ಬೆಂಕಿ ಆರಿಸಲು ಪ್ರಯತ್ನಿಸುವ ವೇಳೆ ಸಿದ್ದಯ್ಯನವರಿಗೂ ಬೆಂಕಿಯ ಜ್ವಾಲೆ ರಾಚಿದೆ. ಪರಿಣಾಮ ಸಿದ್ದಯ್ಯ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಮೈ ಮತ್ತು ಕೈ ಕಾಲುಗಳು ಬೆಂಕಿಗೆ ಸುಟ್ಟುಹೋಗಿ ಸ್ಥಳದಲ್ಲೇ ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಅಕ್ಕಪಕ್ಕದ ತೋಟದವರು ಸಿದ್ದಯ್ಯ ಬೆಂಕಿಯಲ್ಲಿ ಬಿದ್ದಿರುವುದನ್ನು ಕಂಡು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದಾರೆ. ಸ್ಥಳಕ್ಕೆ ಪಿಎಸ್.ಐ ಸಂಗಮೇಶ್ ಮೇಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳವೂ ಸಹ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿದೆ. ಮೃತ ರೈತ ಸಿದ್ದಯ್ಯನವರಿಗೆ ಮೂವರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳು ಇದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪ್ರದಾಯ ತಿರಸ್ಕರಿಸದಿದ್ರೆ ಪ್ರಗತಿಶೀಲತೆ ಪ್ರಬಲವಾಗದು
ಸೋಮಾರಿಗಳಾಗದೆ ಕ್ರಿಯಾಶೀಲರಾಗಲಿ