ಕನ್ನಡಪ್ರಭ ವಾರ್ತೆ ಮುಧೋಳ
ಮುಧೋಳ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಕೃಷಿ, ವ್ಯಾಪಾರ, ಉದ್ಯೋಗ, ಶಿಕ್ಷಣ, ಕೈಗಾರಿಕೆ, ಕ್ರೀಡೆ, ವೈದ್ಯಕೀಯ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ ಎಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.ಮುಧೋಳ ನಗರದ ಬ್ರಹ್ಮಗಡ್ಡಿ ಮಠದ ಹತ್ತಿರ (ಶಿವಾಜಿ ಸರ್ಕಲ್)ದಲ್ಲಿ ನೂತನವಾಗಿ ನಿರ್ಮಿಸಲಾದ ಹುಣಶಿಕಟ್ಟಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಮುಧೋಳದಲ್ಲಿರುವ ವೈದ್ಯರು ಬೇರೆಡೆಯಲ್ಲಿರುವ ಕಾರ್ಪೊರೇಟ್ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳಿಸಬೇಡಿ. ಕಾರಣ ಇಲ್ಲಿನ ವೈದ್ಯರು ಸಾಕಷ್ಟು ಬುದ್ಧಿವಂತ, ನುರಿತು ತಜ್ಞರಿದ್ದಾರೆ ಮತ್ತು ಆಧುನಿಕ ವೈದ್ಯಕೀಯ ಉಪಕರಣಗಳನ್ನು ಹೊಂದಿರುವ ಆಸ್ಪತ್ರೆಗಳನ್ನು ನಿರ್ಮಿಸಿದ್ದಾರೆ. ತಾವು ಕಾರ್ಪೋರೇಟ್ ಆಸ್ಪತ್ರೆಗಳ ವೈದ್ಯರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಕಷ್ಟು ಸಲ ತಾವು ಸಾಬೀತುಪಡಿಸಿದ್ದಿರಿ ಎಂಬುವುದನ್ನು ನಾನು ಗುರುತಿಸಿದ್ದೇನೆ ಎಂದರು.ವೈದ್ಯರಾದವರು ರೋಗಿಗಳಿಗೆ ಅತ್ಯುತ್ತಮ ಸೇವೆ ಒದಗಿಸಬೇಕು. ಅದರಲ್ಲೂ ಬಡ ರೋಗಿಗಳಿಗೆ ವಿಶೇಷ ರಿಯಾಯತಿಯಲ್ಲಿ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಿದರೆ ತಮ್ಮ ಸೇವೆ ಸಾರ್ಥಕವಾಗಲಿದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ಎಸ್.ಆರ್.ಪಾಟೀಲ ಮತ್ತು ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಹುಣಶಿಕಟ್ಟಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಬಡವರ ಪಾಲಿಗೆ ವರದಾನವಾಗಲಿ ಎಂದು ಶುಭ ಹಾರೈಸಿ, ವೈದ್ಯಕೀಯ ಸೇವೆ ಕೊಂಡಾಡಿದರು. ಡಾ.ಆರ್.ಟಿ. ಪಾಟೀಲ ಶಸ್ತ್ರಚಿಕಿತ್ಸಾ ಸಂಕೀರ್ಣವನ್ನು ಹಾಗೂ ಡಾ.ವಿ.ಎನ್.ನಾಯಕ ಐಸಿಯು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಮುಧೋಳದ ನೂತನ ಹುಣಶಿಕಟ್ಟಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸ್ಥಳೀಯ ಜನರಿಗೆ ಸುಲಭವಾಗಿ ಲಭ್ಯವಾಗುವ ಆಧುನಿಕ ಉಪಕರಣಗಳನ್ನು ಹೊಂದಿರುವ ವೈದ್ಯಕೀಯ ಸೇವೆ ನೀಡಲು ಸಿದ್ದಗೊಂಡಿರುವುದು ಹೆಮ್ಮೆ ಮತ್ತು ಅಭಿಮಾನ. ಇತ್ತೀಚೆಗೆ ಹೊಸ ಹೊಸ ರೋಗಗಳು ಬರುವುದರಿಂದ ವೈದ್ಯರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೇ ಭಯಾನಕ ರೋಗಗಳು ಬಂದಾಗ ವೈದ್ಯರಾದವರು ರೋಗಿಗಳಿಗೆ ಆತ್ಮವಿಶ್ವಾಸ ಮೂಡಿಸುವಂತಹ ಮಾತುಗಳನ್ನಾಡಿದರೆ ರೋಗಿಗಳು ಗುಣಮುಖರಾದಂತೆ. ವೈದ್ಯರು ರೋಗಿಗಳ ಜೊತೆ ಪ್ರೀತಿ, ವಿಶ್ವಾಸ, ಮಮತೆ, ಕರುಣೆಯಿಂದ ವರ್ತಿಸಬೇಕು. ಅವರ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಬೇಕೆಂದು ಉದಾಹರಣೆ ಸಮೇತ ವಿವರಿಸಿದರು.ಡಾ.ಕಿರಣ ಹುಣಶಿಕಟ್ಟಿ ಅವರ ತಂದೆ ಮುಧೋಳ ಆರ್.ಎಂ.ಜಿ ಪ.ಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯ ವಿ.ಪಿ.ಹುಣಶಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮುಧೋಳ ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರ ಆರೋಗ್ಯ ರಕ್ಷಣೆಗಾಗಿ ಈಗಾಗಲೇ 8 ವರ್ಷಗಳಿಂದ ಹುಣಶಿಕಟ್ಟಿ ಆಸ್ಪತ್ರೆಯು ಉತ್ತಮ ಸೇವೆ ನೀಡುತ್ತ ಬಂದಿದೆ. ಈಗ ಸುಸಜ್ಜಿತ, ಆಧುನಿಕ ವೈದ್ಯಕೀಯ ಉಪಕರಣಗಳನ್ನು ಹೊಂದಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿದ್ದೇವೆ. ನಾವು ದುಡ್ಡು ಮಾಡಬೇಕೆಂಬ ದುರಾಸೆಯಿಂದ ಈ ಆಸ್ಪತ್ರೆ ನಿರ್ಮಿಸಿಲ್ಲ. ಗ್ರಾಮೀಣ ಭಾಗದ ಬಡ ರೋಗಿಗಳಿಗೆ, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂಬ ಮಹಾದಾಸೆ ಹೊಂದಿದ್ದೇವೆ. ಕಿರಣ ಫೌಂಡೇಶನ್ ಹೆಸರಿನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಿಯಾಯತಿ ದರದಲ್ಲಿ ಆರೋಗ್ಯ ಸೇವೆ ಮಾಡುವ ಯೋಜನೆ ನಮ್ಮದಾಗಿದೆ. ನಮಗೆ ಅನ್ನ, ನೀರು, ಉದ್ಯೋಗ ಒದಗಿಸಿದ ಈ ಭಾಗದ ಜನರ ಋಣವನ್ನು ತೀರಿಸುವುದು ನಮ್ಮ ಮುಖ್ಯ ಉದ್ದೇಶ ಇದೆ ಎಂದರು.ಎರೆಹೊಸಹಳ್ಳಿಯ ವೇಮನಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಡಾ.ಕಿರಣ ವೆಂ.ಹುಣಶಿಕಟ್ಟಿ ಸ್ವಾಗತಿಸಿದರು. ಮುಧೋಳ ಐಎಂಎ ಅಧ್ಯಕ್ಷ ಡಾ.ಕೆ.ಎಲ್.ಉದಪುಡಿ, ಡಾ.ವಿ.ಎನ್.ನಾಯಕ, ಕಲಾವತಿ ವೆಂ.ಹುಣಶಿಕಟ್ಟಿ, ಡಾ.ಶೃತಿ ಕಿರಣ ಹುಣಶಿಕಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.