ಕಾರಟಗಿ: ಕನ್ನಡ ಭಾಷೆಯ ಬಗೆಗೆ ಅಭಿಮಾನ ಹೆಚ್ಚಿಸಿಕೊಂಡು ಸ್ವಾಭಿಮಾನ ಬೆಳೆಸಿಕೊಳ್ಳಬೇಕಾಗಿದೆ, ಈ ನೆಲ,ಜಲ, ಭಾಷೆಯ ಅಭಿಮಾನ ನಮ್ಮಲ್ಲಿ ಮೂಡಿಸಿಕೊಳ್ಳುವುದು ಅತ್ಯವಶ್ಯ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.
ಇಲ್ಲಿನ ಶ್ರೀಸಿದ್ದೇಶ್ವರ ಬಯಲು ರಂಗ ಮಂದಿರದಲ್ಲಿ ತಾಲೂಕಾಡಳಿತ, ತಾಪಂ ಮತ್ತು ಪುರಸಭೆ ಸಂಯುಕ್ತಾಶ್ರಯದಲ್ಲಿ ೭೦ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಉದ್ಘಾಟಿಸಿ, ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಶನಿವಾರ ಮಾತನಾಡಿದರು.ಕನ್ನಡ ನೆಲ ಮತ್ತು ಜಲದ ಬಗೆಗೆ ಅನ್ಯ ರಾಜ್ಯದ ಜನರಿಗೆ ಪ್ರೀತಿ ಮತ್ತು ವ್ಯಾಮೋಹ ಜಾಸ್ತಿ. ಹೀಗಾಗಿ ನಮ್ಮಲ್ಲಿಯೇ ಬಂದು ನೆಲಯೂರಿದ್ದರೂ ಅವರಿಗೆ ಇನ್ನೂ ಕನ್ನಡ ಭಾಷೆಯ ಬಗೆಗೆ ಪ್ರೀತಿ, ಅಭಿಮಾನ ಮೂಡುತ್ತಿಲ್ಲ.ಹಾಗಾಗಿ ನಾವೆಲ್ಲ ಕನ್ನಡಿಗರು ಮೊದಲು ಭಾಷಾಭಿಮಾನ ಬೆಳೆಸಿಕೊಂಡು ಕನ್ನಡ ಇವರಿಗೆ ಕಲಿಸಬೇಕಾಗಿದೆ. ಆ ಕಾರಣಕ್ಕೆ ನಾವೆಲ್ಲ ಭಾಷೆಯ ವಿಷಯದಲ್ಲಿ ನೆಲ ಜಲದ ವಿಷಯದಲ್ಲಿ ಸ್ವಾಭಿಮಾನಿಗಳಾಗೋಣ ಎಂದರು.
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ನಾಮಕರಣಗೊಂಡು ಸುವರ್ಣ ಸಂಭ್ರಮ ಕಳೆದ ವರ್ಷ ಆಚರಿಸಿದ್ದೇವೆ.ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ಎಂಬುದು ಬರೀ ಭಾಷೆಯಲ್ಲ. ಅದು ಜೀವನ ಉಸಿರು, ಕನ್ನಡ ಭಾಷೆ ಸಾಹಿತ್ಯ ಪ್ರಪಂಚದಲ್ಲಿ ಹೆಮ್ಮರವಾಗಿ ಬೆಳೆದಿದೆ. ಹಾಗೆಯೇ ಕನ್ನಡ ಭಾಷೆ, ನೆಲ, ಜಲದ ರಕ್ಷಣೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು. ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಸಮಗ್ರ ಸಮೃದ್ಧಿ ಹಾಗೂ ಸ್ವಾಭಿಮಾನ ಈ ಉದ್ದೇಶ ಇಟ್ಟುಕೊಂಡಾಗ ಮಾತ್ರ ಕನ್ನಡದ ಏಳ್ಗೆ ಸಾದ್ಯ. ಮಕ್ಕಳಲ್ಲಿ ನಾಡು ನುಡಿ ಸಂಸ್ಕೃತೀಯ ಬಗ್ಗೆ ಪ್ರೀತಿ ವಾತ್ಸಲ್ಯವನ್ನು ಬೆಳಸಬೇಕು ಎಂದರು.ತಾಪಂ ಇಓ ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಮತ್ತು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಅರಳಿ ನಾಗರಾಜ ಮಾತನಾಡಿ, ನಾವೆಲ್ಲರೂ ಸೇರಿ ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾಗಿದೆ. ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗದೆ ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಕನ್ನಡ ಭಾಷೆ ಕಲಿಸೋಣ ಜತೆಗೆ ನಾವೆಲ್ಲರೂ ಕನ್ನಡ ಭಾಷೆಯ ಬಗೆಗೆ ಸ್ವಾಭಿಮಾನ ಬೆಳೆಸಿಕೊಂಡು ಅನ್ಯ ಭಾಷಿಕರ ಜತೆಗೆ ಕನ್ನಡದಲ್ಲಿಯೇ ವ್ಯವಹರಿಸೋಣ ಆಗ ಮಾತ್ರ ನಮ್ಮ ನೆಲದಲ್ಲಿ ಕನ್ನಡ ಬೆಳೆಸಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಖಜಾನೆ ಅಧಿಕಾರಿ ಹನುಮಂತಪ್ಪ ನಾಯಕ ಮಾತನಾಡಿದರು. ಇದಕ್ಕೂ ಮುನ್ನ ಶಿಕ್ಷಕ ಮೆಹಬೂಬ ಕಿಲ್ಲೇದಾರ ನಾಡ ಹಾಗೂ ರೈತ ಗೀತೆ ಹಾಡಿದರು. ವಿವಿಧ ಶಾಲೆಗಳ ಭಾರತ ಸ್ಕೌಟ್ಸ & ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ತಹಸೀಲ್ದಾರ್ ಎಂ.ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಿದರು.ಈ ವೇಳೆ ಪುರಸಭೆ ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸದಸ್ಯರಾದ ಗ್ಯಾರೇಶ ಶೇಖರಪ್ಪ, ಸಿದ್ದಪ್ಪ ಕಾಯಿಗಡ್ಡಿ, ಪಿ.ಐ.ಸುಧೀರ ಕುಮಾರ ಬೆಂಕಿ, ಗ್ಯಾರಂಟಿ ಯೋಜನೆಯ ಸಮಿತಿಯ ಸದಸ್ಯ ಸೋಮನಾಥ ದೊಡ್ಡಮನಿ,ಶಕುಂತಲಾ, ರೇಣುಕಾ ದೇವಿ, ಖಾಜಾ ಹುಸೇನ್ ಮುಲ್ಲಾ ಸೇರಿದಂತೆ ಪಟ್ಟಣದ ಪ್ರಮುಖರು, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಶಿಕ್ಷಕ ಶಿಕ್ಷಕಿಯರು ಇದ್ದರು.
ಶಿಕ್ಷಕರಾದ ಮಂಜುನಾಥ ಚಿಕ್ಕೇನಕೊಪ್ಪ ಮತ್ತು ತಿಮ್ಮಣ ನಾಯಕ ಕಾರ್ಯಕ್ರಮ ನಿರ್ವಹಿಸಿದರು.