ಹೊಸಪೇಟೆ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಆಗುತ್ತದೆಂಬ ಆರೋಪ ಸುಳ್ಳಾಗಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲುವುದಿಲ್ಲ. ಗ್ಯಾರಂಟಿ ನಿಲ್ಲಿಸಲು ನಮ್ಮವರೇ ಹೇಳಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸುತಾರಾಂ ಒಪ್ಪಿಲ್ಲ. ಪಂಚ ಗ್ಯಾರಂಟಿಗಳು ಅಬಾಧಿತವಾಗಿ ಮುಂದುವರೆಯಲಿವೆ ಎಂದು ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಹೇಳಿದರು.ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಜಿಪಂನಿಂದ ಶನಿವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಬಡಜನರ, ರೈತರ ಮತ್ತು ಮಹಿಳೆಯರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ಸಶಕ್ತರನ್ನಾಗಿಸಿವೆ. ರಾಜ್ಯದಲ್ಲಿ ಆರ್ಥಿಕ ದಿವಾಳಿ ಸೃಷ್ಟಿಯಾಗಲಿದೆ ಎಂದು ಆರೋಪಿಸಿದ್ದರು. ಆದರೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸ್ವತಃ ಮುಖ್ಯಮಂತ್ರಿಯೇ ಚಾಲನೆ ನೀಡುತ್ತಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಸಾರಿಗೆ, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪೂರೈಕೆ, ಅನ್ನಭಾಗ್ಯ ಯೋಜನೆಯಡಿ ಬಡಕುಟುಂಬಗಳಿಗೆ ಅಹಾರ ಭದ್ರತೆ ಮತ್ತು ಕುಟುಂಬದ ಯಜಮಾನಿಯರಿಗೆ ಪ್ರತಿ ತಿಂಗಳು ₹2 ಸಾವಿರ ವಿತರಣೆ ಹಾಗೂ ಯುವಜನತೆ ಪ್ರೋತ್ಸಾಹ ಧನ ನೀಡುತ್ತಿರುವುದರಿಂದ ಸಂವಿಧಾನಾತ್ಮಕವಾದ ಆಶಯಗಳನ್ನು ಪಾಲನೆ ಮಾಡಲಾಗಿದೆ. ಇದರಿಂದ ರಾಜ್ಯದ ಜನರ ತಲಾ ಆದಾಯ ವೃದ್ಧಿಸಿದೆ. ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಸ್ವಾವಲಂಬಿ, ಸ್ವಾಭಿಮಾನದ ಬದುಕು ನಿರ್ವಹಿಸುವಂತೆ ಸಹಕರಿಸಿದೆ. ಜನರು ಸರ್ಕಾರದ ಯೋಜನೆಗಳನ್ನು ಬೆಂಬಲಿಸುತ್ತಿದ್ದಾರೆ. ಇದೇ ಮಾದರಿಯನ್ನು ವಿವಿಧ ರಾಜ್ಯಗಳಲ್ಲಿ ಮಾದರಿಯನ್ನಾಗಿಸಲು ಚಿಂತನೆ ನಡೆಸುವಂತಾಗಿದೆ ಎಂದರು.ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಹತ್ತು ಜಿಲ್ಲೆಗಳಲ್ಲಿ ಗ್ಯಾರಂಟಿ ಉತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸುವ ಮೂಲಕ ಯೋಜನೆಯ ಅನುಷ್ಠಾನದ ಪ್ರಗತಿಯನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ರಾಜ್ಯ ಉಪಾಧ್ಯಕ್ಷ ಎಸ್.ಆರ್. ಮೆಹರೂಜ್ ಖಾನ್ ಪ್ರಾಸ್ತಾವಿಕ ಮಾತನಾಡಿದರು.ಜಾಗೃತ ಕರ್ನಾಟಕ ಸಂಸ್ಥೆಯ ಡಾ.ವಾಸು ಎಚ್.ವಿ. ಗ್ಯಾರಂಟಿ ಯೋಜನೆಗಳು ಮತ್ತು ರಾಜ್ಯದ ಅಭಿವೃದ್ಧಿ ಕುರಿತು ಕಾರ್ಯಾಗಾರದಲ್ಲಿ ಪಿಪಿಟಿ ಪ್ರದರ್ಶನದ ಮೂಲಕ ವಿಶೇಷ ಉಪನ್ಯಾಸ ನೀಡಿದರು.
ಗ್ಯಾರಂಟಿ ಯೋಜನೆಯ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಸೂರಜ್ ಹೆಗಡೆ, ಪುಷ್ಪಾ ಅಮರನಾಥ, ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿದರು. ಮಾಜಿ ಸಚಿವ ಎಚ್.ಆಂಜನೇಯ, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ಅಕ್ರಮ್ ಷಾ, ಎಸ್ಪಿ ಎಸ್.ಜಾಹ್ನವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಎಸ್.ಶ್ವೇತಾ, ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪನಿರ್ದೇಶಕ ರಿಯಾಜ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಹುದ್ದಾರ, ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಕೆ.ಸತೀಶ್ ಭಾಗವಹಿಸಿದ್ದರು.