ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಧಾನಿ ಅವಹೇಳನ ಆರೋಪ: ಪುತ್ತೂರು ಪುಡಾ ಅಧ್ಯಕ್ಷರಿಂದ ಪ್ರತಿದೂರು

KannadaprabhaNewsNetwork | Published : May 15, 2025 1:30 AM
Follow Us

ಸಾರಾಂಶ

ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಅವರು ಪ್ರತಿದೂರು ನೀಡಿ, ಫೇಸ್ ಬುಕ್ ಪೋಸ್ಟ್‌ನಲ್ಲಿ ಹಾಕಿರುವ ವಿಚಾರವನ್ನು ತಿರುಚಿ ಬಿಜೆಪಿಯವರು ಪ್ರಧಾನ ಮಂತ್ರಿ ಹಾಗೂ ತನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಫೇಸ್‌ಬುಕ್ ಪೋಸ್ಟ್‌ಲ್ಲಿ ಪ್ರಧಾನ ಮಂತ್ರಿಯನ್ನು ಅವಹೇಳನ ಮಾಡಿ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪುತ್ತೂರು ನಗರಯೋಜನಾ ಪ್ರಾಧಿಕಾರ (ಪುಡಾ)ಅಧ್ಯಕ್ಷರ ವಿರುದ್ದ ದೂರು ನೀಡಿದ ಬೆನ್ನಲ್ಲೇ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಅವರು ಪ್ರತಿದೂರು ನೀಡಿ, ಫೇಸ್ ಬುಕ್ ಪೋಸ್ಟ್‌ನಲ್ಲಿ ಹಾಕಿರುವ ವಿಚಾರವನ್ನು ತಿರುಚಿ ಬಿಜೆಪಿಯವರು ಪ್ರಧಾನ ಮಂತ್ರಿ ಹಾಗೂ ತನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಪುತ್ತೂರು ನಗರ ಠಾಣೆಯಲ್ಲಿ ಪ್ರತಿದೂರು ನೀಡಿರುವ ಅಮಳ ರಾಮಚಂದ್ರ, ನನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಕೆಲವು ವ್ಯಂಗ್ಯಚಿತ್ರಗಳನ್ನು ಹಾಗೂ ಪಾಕಿಸ್ತಾನದ ಪ್ರಧಾನ ಮಂತ್ರಿಯನ್ನು ಉದ್ದೇಶಿಸಿ ‘ದೇಶದ ಸಹೋದರತೆಗೆ - ಸಾರ್ವಭೌಮತೆಗೆ ಕಾರ್ಕೋಟಕ ವಿಷ’ ಎಂಬ ವಾಕ್ಯದೊಂದಿಗೆ ‘ಇವರು ವಿಶ್ವಗುರುವಲ್ಲ, ವಿಷಗುರು!’ ಎಂಬ ಬರಹವಿರುವ ಪೋಸ್ಟನ್ನು ಹಂಚಿಕೊಂಡಿದ್ದೆ. ಈ ಪೋಸ್ಟ್‌ಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅವಹೇಳನ ಎಂದು ಬಿಜೆಪಿಗರು ನನ್ನ ಮೇಲೆ ತಮ್ಮ ಠಾಣೆಯಲ್ಲಿ ದೂರು ನೀಡಿರುವುದು ಮಾತ್ರವಲ್ಲದೆ ಈ ದೂರಿನ ಪ್ರತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ನನ್ನ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ ಈ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಅದು ಪಾಕಿಸ್ತಾನದ ಪ್ರಧಾನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಕಿದ ಪೋಸ್ಟ್ ಆಗಿರುತ್ತದೆ. ವಿಚಾರ ಹೀಗಿದ್ದರೂ ಇವುಗಳು ನಮ್ಮ ದೇಶದ ಪ್ರಧಾನ ಮಂತ್ರಿಗಳನ್ನು ಉದ್ದೇಶಿಸಯೇ ಹಾಕಿರುವುದೆಂದು ತಿರುಚಿ ಬಿಜೆಪಿಯವರು ದೂರು ನೀಡಿದ್ದಾರೆ. ಅವಹೇಳನ ಮಾಡಿದ ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಮತ್ತು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಹಾಗೂ ಇತರರ ಮೇಲೆ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.ಈ ಸಂದರ್ಭ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ಜೊತೆಗಿದ್ದರು.