ಕನ್ನಡಪ್ರ ವಾರ್ತೆ ಬೆಳಗಾವಿಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಚಿಕ್ಕಪ್ಪನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ಏನಿದು ಪ್ರಕರಣ?:
ಕಳೆದ ನಾಲ್ಕೈದು ವರ್ಷಗಳ ಹಿಂದೆ ಆರೋಪಿ ಕಂಡೋಬಾ ವೈಯಕ್ತಿಕ ಕಾರಣಕ್ಕಾಗಿ ತನ್ನ ಚಿಕ್ಕಪ್ಪ ಕೇಶವ ಬೋಸಲೆ ಬಳಿ ₹ 60 ಸಾವಿರ ಸಾಲ ಪಡೆದುಕೊಂಡಿದ್ದ. ಕೆಲವು ತಿಂಗಳ ಹಿಂದಷ್ಟೇ ಕಂಡೋಬಾ ತಾನು ಪಡೆದ ಸಾಲವನ್ನು ಮರಳಿ ಚಿಕ್ಕಪ್ಪನಿಗೆ ಕೊಡಲು ಹೋಗಿದ್ದಾನೆ. ಈ ವೇಳೆ ಹತ್ಯೇಗೀಡಾದ ಕೇಶವ ನೀಡಿದ ಸಾಲಕ್ಕೆ ಬಡ್ಡಿ ಸೇರಿದಂತೆ ಒಟ್ಟು ₹2 ಲಕ್ಷವಾಗಿದ್ದು, ಬಡ್ಡಿ ಸಹಿತ ಎಲ್ಲ ಹಣ ಕೊಡುವಂತೆ ತಿಳಿಸಿದ್ದಾನೆ.ಈ ಹಿನ್ನೆಲೆಯಲ್ಲಿ ಕಂಡೋಬಾ ಬಡ್ಡಿ ಸೇರಿ ಹಣ ತೆಗೆದುಕೊಂಡು ಚಿಕ್ಕಪ್ಪನಿಗೆ ಹಿಂದಿರುಗಿಸಲು ಹೋಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಅಷ್ಟರಲ್ಲಿ ಕೇಶವ ಬೋಸಲೆ ತಾನು ಸಾಲ ಕೊಡುವ ಸಮಯದಲ್ಲಿ ಹಲವು ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದನು. ಆ ದಾಖಲೆಗಳ ಮೂಲಕ ಕಂಡೋಬಾಗೆ ಸೇರಿದ್ದ 2.5 ಎಕರೆ ಜಮೀನನ್ನು ಕೇಶವ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದ.
ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಕಂಡೋಬಾಗೆ ಹಿನ್ನಡೆಯಾಗಿದ್ದು, ಕೇಶವನ ಪರವಾಗಿ ಆದೇಶ ಬಂದಿದೆ. ಇದರಿಂದ ಅಸಮಾಧಾನಗೊಂಡ ಕಂಡೋಬಾ ಇತ್ತೀಚೆಗೆ ಕೇಶವನನ್ನು ಪುಸಲಾಯಿಸಿ ಬಾರ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಕಂಠಪೂರ್ತಿ ಕುಡಿಸಿ ನಗರದ ಹೊರ ವಲಯಕ್ಕೆ ಕರೆದುಕೊಂಡು ಬಂದು ತಲೆಯ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ.ಈ ಪ್ರಕರಣದ ಬೆನ್ನು ಹತ್ತಿದ ಐಗಳಿ ಪೊಲೀಸರು ಹಂತಕನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಪೊಲೀಸರ ಕಾರ್ಯಕ್ಕೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.