ಡಿಸಿ ದಿವ್ಯಾಪ್ರಭು ವರ್ಗಾವಣೆಗೆ ಪಿತೂರಿ ಆರೋಪ

KannadaprabhaNewsNetwork |  
Published : Oct 31, 2023, 01:18 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರ ವರ್ಗಾವಣೆಗೆ ಜನಪ್ರತಿನಿಧಿಗಳು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿರುವ ರೈತ ಸಂಘಟನೆಗಳು ತೀವ್ರ ಅಸಮಾಧಾನ ಹೊರ ಹಾಕಿವೆ. ಸೋಮವಾರ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿದರು. ರೈತ ಸಂಘಟನೆಯ ಮಹಿಳಾ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಇದ್ದದ್ದು ವಿಶೇಷವಾಗಿತ್ತು. ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಸಿ, ಹಾಗೊಂದು ವೇಳೆ ಡಿಸಿಯವರನ್ನು ವರ್ಗಾವಣೆ ಮಾಡಿದ್ದೇ ಆದಲ್ಲಿ ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಜನಪ್ರತಿನಿಧಿಗಳ ನಡೆಗೆ ತೀವ್ರ ಅಸಮಾಧಾನ । ಚಿತ್ರದುರ್ಗದಲ್ಲಿ ರೈತ ಸಂಘದಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರ ವರ್ಗಾವಣೆಗೆ ಜನಪ್ರತಿನಿಧಿಗಳು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿರುವ ರೈತ ಸಂಘಟನೆಗಳು ತೀವ್ರ ಅಸಮಾಧಾನ ಹೊರ ಹಾಕಿವೆ. ಸೋಮವಾರ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿದರು. ರೈತ ಸಂಘಟನೆಯ ಮಹಿಳಾ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಇದ್ದದ್ದು ವಿಶೇಷವಾಗಿತ್ತು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಸಿ, ಹಾಗೊಂದು ವೇಳೆ ಡಿಸಿಯವರನ್ನು ವರ್ಗಾವಣೆ ಮಾಡಿದ್ದೇ ಆದಲ್ಲಿ ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ದಿವ್ಯಾಪ್ರಭು ಜಿಲ್ಲಾಧಿಕಾರಿಯಾಗಿ ಬಂದ ನಂತರ ಅನೇಕ ಅತ್ಯುತ್ತಮ ಕೆಲಸ ಮಾಡಿದ್ದಾರೆ. ವೇದಾವತಿ ನದಿ ತಟದಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾವನ್ನು ನಿಯಂತ್ರಿಸಿದ್ದಾರೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ್ದಾರೆ. ವಿಧಾನಸಭೆ ಚುನಾವಣೆಗಳ ಅತ್ಯಂತ ಶಾಂತಿಯುತವಾಗಿ ನಡೆಸಿದ್ದಾರೆ. ಎಲ್ಲೂ ಗಲಾಟೆಗಳು ಆಗದಂತೆ ನೋಡಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ದಕ್ಷ ಆಡಳಿತ ಜನಪ್ರತಿನಿಧಿಗಳಿಗೆ ಬೇಡವಾಯಿತೇ ಎಂದು ಪ್ರಶ್ನಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಈ ಬಾರಿಯ ಮುಂಗಾರು ಹಂಗಾಮು ಕೈ ಕೊಟ್ಟು ಬಿತ್ತನೆ ಮಾಡಿದ ಸೇಂಗಾ, ಮೆಕ್ಕೆಜೋಳ, ಈರುಳ್ಳಿ, ಬೆಳೆಗಳು ಒಣಗಿ ಹೋಗಿದ್ದವು. ಸರ್ಕಾರ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಿದಾಗ ಚಳ್ಳಕೆರೆ, ಹಿರಿಯೂರು ತಾಲೂಕುಗಳು ಬಿಟ್ಟು ಹೋಗಿದ್ದವು. ಎರಡೂ ತಾಲೂಕುಗಳ ಬೆಳೆ ಸಮೀಕ್ಷೆ ಮಾಡಿಸಿ, ಕೃಷಿ ಸಚಿವರು ಜಿಲ್ಲೆಗೆ ಭೇಟಿ ನೀಡಿದಾಗ ಬರ ಪರಿಸ್ಥಿತಿಯ ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಪಟ್ಟಿಗೆ ಚಳ್ಳಕೆರೆ, ಹಿರಿಯೂರು ಸೇರ್ಪಡೆಯಾಗಿದ್ದವು ಎಂದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ಜಿಲ್ಲಾಧಿಕಾರಿ ವರ್ಗಾವಣೆಗೆ ಈಗಾಗಲೇ ಜನ ಪ್ರತಿನಿಧಿಗಳು ಗಂಭೀರ ಪ್ರಯತ್ನ ನಡೆಸಿರುವ ಸಂಗತಿ ತಿಳಿದು ಬಂದಿದೆ. ಅತ್ಯುತ್ತಮ ಜಿಲ್ಲಾಧಿಕಾರಿಯನ್ನು ಕೇವಲ ಒಂದೇ ವರ್ಷಕ್ಕೆ ವರ್ಗಾವಣೆ ಮಾಡುವುದು ಸೂಕ್ತವಲ್ಲ. ಭ್ರಷ್ಟರ ವರ್ಗಾವಣೆ ಮಾಡುವುದನ್ನು ಕೇಳಿದ್ದೆವು. ಆದರೆ ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಯನ್ನು ಅವಧಿಗೂ ಮುನ್ನ ವರ್ಗಾವಣೆ ಮಾಡುವುದನ್ನು ಕಂಡಿರುವುದು ಇದೇ ಮೊದಲು. ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ವರ್ಗಾವಣೆ ಮಾಡಿಸಿ ಜನತೆಯ ಕೆಂಗಣ್ಣಿಗೆ ಗುರಿಯಾಗುವುದು ಬೇಡ. ಉತ್ತಮ ಅಧಿಕಾರಿಗಳ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದು ಒತ್ತಾಯಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಜಿಲ್ಲಾ ಉಪಾಧ್ಯಕ್ಷರುಗಳಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಜಿಲ್ಲಾ ಮಹಿಳಾ ಸಂಚಾಲಕಿ ಸುಧಾ, ಶಶಿಕಲಾ, ಚಳ್ಳಕೆರೆ ತಾಲೂಕು ಅಧ್ಯಕ್ಷ ಟಿ.ಹಂಪಣ್ಣ, ಕಲ್ಲೇನಹಳ್ಳಿ ಕುಮಾರ್, ಚೇತನ ಯಳನಾಡು, ವಿ.ಶ್ರೀನಿವಾಸ ರೆಡ್ಡಿ, ಜೆ.ಗುರುಮೂರ್ತಿ, ರೇಣುಕಮ್ಮ, ಮ ಹದೇವಪ್ಪ, ಗೌರಮ್ಮ, ಹನುಮಕ್ಕ, ಗಂಗಮ್ಮ, ವರಲಕ್ಷ್ಮಿ, ಪ್ರೇಮಕ್ಕ ಪ್ರತಿಭಟನೆ ನೇತೃತ್ವ ವಹಿಸಿದ್ದರು.

---------------ಬೆಸ್ಕಾಂ ಅಧಿಕಾರಿಗಳು ತೋಟದ ಮನೆಗಳಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಕಡಿತಗೊಳಿಸಿದಾಗ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದದ್ದರು. ಬೆಸ್ಕಾಂ ಎಂಡಿಯವರನ್ನು ಕರೆಸಿ ವಾಸ್ತವಾಂಶ ಮನವರಿಕೆ ಮಾಡಿಕೊಟ್ಟಿದ್ದರು. ನಂತರದಲ್ಲಿ ರಾತ್ರಿ ವೇಳೆ ತೋಟದ ಮನೆಗಳಿಗೆ ವಿದ್ಯುತ್ ಪೂರೈಕೆಯಾಗಿತ್ತು. ವಿಮಾ ಕಂಪನಿ ಅಧಿಕಾರಿಗಳ ಸಭೆ ನಡೆಸಿ ಮಧ್ಯಂತರ ವಿಮೆ ಪಾವತಿ ಮಾಡುವಂತೆ ತಾಕೀತು ಮಾಡಿದ್ದರು. ರೈತರ ಪರವಾಗಿ ಕಾರ್ಯನಿರ್ವಹಿಸುವ ಜಿಲ್ಲಾಧಿಕಾರಿಯ ವರ್ಗಾವಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ.

- ಕೆ.ಪಿ.ಭೂತಯ್ಯ, ರೈತ ಸಂಘದ ರಾಜ್ಯ ಉಪಾಧ್ಯಕ್ಷ-----------

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ