ಕನ್ನಡಪ್ರಭ ವಾರ್ತೆ ಸಿಂದಗಿ
ನಾವು ಪ್ರಶಸ್ತಿಗಳ ಹಿಂದೆ ಬೀಳದೇ, ಪ್ರಶಸ್ತಿಗಳೇ ನಮ್ಮ ಹಿಂದೆ ಬೀಳುವಂತೆ ಸಾಧನೆ ತೋರಬೇಕು. ಈ ಬಾರಿ ಹ.ಮ.ಪೂಜಾರರಂತಹ ಅರ್ಹ ಹಿರಿಯರನ್ನು, ವಿವಿಧ ಕ್ಷೇತ್ರದಲ್ಲಿ ತೋರಿದ ಸಾಧನೆ ಗುರುತಿಸಿರುವುದು ಹೆಮ್ಮೆ ತಂದಿದೆ. ಶಾಸಕರು ಸೇರಿ ಎಲ್ಲರೂ ಅಭಿನಂದನಾ ಗ್ರಂಥವನ್ನು ಪ್ರಕಟಿಸುವ ಮೂಲಕ ಅವರ ಸಾರ್ಥಕ ಬದುಕನ್ನು ಗೌರವಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಶನಿವಾರ ಕನ್ನಡ ಸಾಹಿತ್ಯ ಗೆಳೆಯರ ಬಳಗದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರ ಅಭಿನಂದನೆ ಹಾಗು ನಾಡಗೀತೆಯ ನೂರರ ಸಂಭ್ರಮದ ನಿಮಿತ್ತ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಹಿರಿಯ ಸಾಹಿತಿ ಪ.ಗು.ಸಿದ್ದಾಪೂರ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಸಂಬಳದ ಅರ್ಧದಷ್ಟುನ್ನು ಮೀಸಲಿಟ್ಟ ಅಪರೂಪದ ಸಾಹಿತಿ, ಶಿಕ್ಷಕ ಹ.ಮ.ಪೂಜಾರ ಅವರದ್ದು ಗೌರವದ ಬದುಕು ಎಂದರು.ಪೂಜಾರ ಗುರುಗಳಿಗೆ ಸೈನ್ಯ ಸೇರುವ ತವಕವಿತ್ತು. ಆದರೆ, ಅವರ ತಂದೆ-ತಾಯಿ ಮಗ ಶಿಕ್ಷಕನಾಗಲಿ ಎಂದು ಕನಸು ಕಟ್ಟಿದಂತೆ, ಶಿಕ್ಷಕರಾಗಿ ಅವರ ಕನಸನ್ನು ನನಸು ಮಾಡಿದ ಅಪರೂಪದ ಶಿಕ್ಷಕರು. ಮಕ್ಕಳ ಭವಿಷ್ಯಕ್ಕಾಗಿ ಮಕ್ಕಳ ಬಳಗ ಕಟ್ಟಿ, ಹತ್ತಾರು ಕತೆ, ಕವನಗಳನ್ನು ರಚಿಸಿ, ಆ ಕೃತಿಗಳಲ್ಲಿ ನೀತಿಯ ಬದುಕು ಕಟ್ಟಿಕೊಳ್ಳಲು ಅಕ್ಷರದೊಂದಿಗೆ ಪ್ರಕಾಶನದವರೆಗೂ ಸಾಗಿದ್ದಾರೆ. ತಮ್ಮ ಜೀವನವನ್ನು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸವೆಸಿದ್ದಾರೆ ಎಂದು ಸ್ಮರಿಸಿದರು.
ಪ್ರಶಸ್ತಿ ಪುರಸ್ಕೃತ ಸಾಹಿತಿ ಹ.ಮ.ಪೂಜಾರ, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ ಮಹಾಸ್ವಾಮಿಗಳು, ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಮಲ್ಲಿಕಾರ್ಜುನ ಯಂಡಿಗೇರಿ ಹಾಗು ಯಾದಗಿರಿ ಸಾಹಿತಿ ಶಿವಶರಣಪ್ಪ ಶಿವೂರ ಮಾತನಾಡಿದರು.ಪ್ರೇರಣಾ ಪಬ್ಲಿಕ್ ಸ್ಕೂಲ್, ಸಂಗಮೇಶ್ವರ ವಿದ್ಯಾ ಸಂಸ್ಥೆ, ಆದರ್ಶ ವಿದ್ಯಾಲಯ, ಜ್ಞಾನಭಾರತಿ ವಿದ್ಯಾ ಮಂದಿರ, ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಕನ್ಯಾ ಪ್ರೌಢಶಾಲೆ, ಕುಮಾರ್ ಇನ್ಫೋಟೆಕ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ನಾಡಗೀತೆ ಹೇಳಿ ನೂರರ ಸಂಭ್ರಮವನ್ನು ಗೌರವಿಸಿದರು.ಪ್ರೆಸ್‌ಕ್ಲಬ್ ಅಧ್ಯಕ್ಷ ಪ್ರೊ.ಶಾಂತು ಹಿರೇಮಠ, ಮಾಜಿ ಶಾಸಕ ರಮೇಶ ಭೂಸನೂರ, ಎ.ಆರ್.ಹೆಗ್ಗನದೊಡ್ಡಿ, ಡಾ.ಅರವಿಂದ ಮನಗೂಳಿ, ಎಮ್.ಎಮ್.ಮುಂಡೇವಾಡಗಿ, ಚಂದ್ರಕಾಂತ ಸಿಂಗೆ, ರವಿ ಗೋಲಾ, ಸಂತೋಷ ಪಾಟೀಲ ಡಂಬಳ, ಪ್ರೇಮಾ ತಾಳಿಕೋಟಿ ಮತ್ತಿತರರಿದ್ದರು.ಜಿಲ್ಲಾ ಜಾಗೃತ ದಳ ಸದಸ್ಯ ರಾಜಶೇಖರ ಕೂಚಬಾಳ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಿದ್ಧಲಿಂಗ ಚೌಧರಿ ನಿರೂಪಿಸಿದರು. ಉಪನ್ಯಾಸಕ ಸಿದ್ಧಲಿಂಗ ಕಿಣಗಿ ವಂದಿಸಿದರು.