ಗೂಳೂರು ಬಳಿ ₹500 ಕೋಟಿ ಮೌಲ್ಯದ 106 ಎಕರೆ ಆಸ್ತಿ ಸ್ವಾಧೀನ: ಡೀಸಿ ಶುಭ ಕಲ್ಯಾಣ್

KannadaprabhaNewsNetwork |  
Published : Jul 10, 2026, 02:00 AM IST
್ಿ | Kannada Prabha

ಸಾರಾಂಶ

ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಪ್ರಕರಣ ಸಂಖ್ಯೆ ಐಎನ್‌ಎ(ಅ) ೨೬/೧೯೯೯-೨೦೦೦ರಲ್ಲಿ ಸಮಗ್ರ ವಿಚಾರಣೆ ನಡೆಸಿದರು. ಪ್ರಕರಣದಲ್ಲಿದ್ದ ಹಲವಾರು ಮೂಲ ಅರ್ಜಿದಾರರು ಮೃತಪಟ್ಟಿದ್ದು, ಅವರ ವಾರಸುದಾರರು ತಮ್ಮ ಪೂರ್ವಜರು ಸದರಿ ಜಮೀನುಗಳಲ್ಲಿ ಯಾವುದೇ ಕಾಲದಲ್ಲೂ ಉಳುಮೆ ನಡೆಸಿಲ್ಲ, ಸ್ವಾಧೀನದಲ್ಲಿಯೂ ಇರಲಿಲ್ಲ ಹಾಗೂ ತಪ್ಪು ತಿಳಿವಳಿಕೆಯಿಂದ ಗೇಣಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಲಿಖಿತವಾಗಿ ಒಪ್ಪಿಕೊಂಡು, ಅರ್ಜಿಗಳನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು ನಗರದಿಂದ ಸುಮಾರು 7 ಕಿಮೀ ದೂರದಲ್ಲಿರುವ 106 ಎಕರೆ 23 ಗುಂಟೆ ವಿಸ್ತೀರ್ಣದ ಅಮೂಲ್ಯ ಸಾರ್ವಜನಿಕ ಆಸ್ತಿಯನ್ನು ಸರ್ಕಾರದ ಸ್ವಾಧೀನದಲ್ಲಿ ಉಳಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಹತ್ವದ ಹಾಗೂ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ.

ತುಮಕೂರು ತಾಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಗ್ರಾಮದ ಸರ್ವೇ ನಂ.3 ಹಾಗೂ ಕಲ್ಲುಮಠ ಗ್ರಾಮದ ಸರ್ವೇ ನಂ.13, 17 ಮತ್ತು 20 ರ ಜಮೀನುಗಳಿಗೆ ಸಂಬಂಧಿಸಿದಂತೆ 1974ರಲ್ಲಿ ಭೂಸುಧಾರಣಾ ಕಾಯ್ದೆ, 1961 ರ ಕಲಂ 48ಎ(1)ರ ಅಡಿಯಲ್ಲಿ ಗೇಣಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಇಂಡೆಕ್ಸ್ ಆಫ್ ಲ್ಯಾಂಡ್ ದಾಖಲೆಗಳ ಪ್ರಕಾರ ಈ ಜಮೀನುಗಳು ‘ದೇವದಾಯ ಇನಾಂತಿ’ ಜಮೀನುಗಳಾಗಿರುವುದರಿಂದ ಭೂಸುಧಾರಣಾ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹಿಂಬರಹ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಮೇಲ್ಮನವಿ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳು ನಡೆದಿದ್ದು, ಅಂತಿಮವಾಗಿ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ 2-6-1999 ರಂದು ನೀಡಿದ ಆದೇಶದಲ್ಲಿ, ಸದರಿ ಜಮೀನುಗಳು ಮೈಸೂರು(ಧಾರ್ಮಿಕ ಮತ್ತು ದತ್ತಿ) ಇನಾಮುಗಳ ನಿರ್ಮೂಲನಾ ಕಾಯ್ದೆ, 1955 ರ ವ್ಯಾಪ್ತಿಗೆ ಒಳಪಡುವ ಇನಾಂ ಜಮೀನುಗಳಾಗಿದ್ದು, ಅವುಗಳ ಕುರಿತ ಹಕ್ಕುದಾರಿಕೆ ಅರ್ಜಿಗಳನ್ನು ಪರಿಶೀಲಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇದೆ ಎಂದು ಸ್ಪಷ್ಟಪಡಿಸಿ, ಪ್ರಕರಣವನ್ನು ಮರುಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿತ್ತು.

ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಪ್ರಕರಣ ಸಂಖ್ಯೆ ಐಎನ್‌ಎ(ಅ) ೨೬/೧೯೯೯-೨೦೦೦ರಲ್ಲಿ ಸಮಗ್ರ ವಿಚಾರಣೆ ನಡೆಸಿದರು. ಪ್ರಕರಣದಲ್ಲಿದ್ದ ಹಲವಾರು ಮೂಲ ಅರ್ಜಿದಾರರು ಮೃತಪಟ್ಟಿದ್ದು, ಅವರ ವಾರಸುದಾರರು ತಮ್ಮ ಪೂರ್ವಜರು ಸದರಿ ಜಮೀನುಗಳಲ್ಲಿ ಯಾವುದೇ ಕಾಲದಲ್ಲೂ ಉಳುಮೆ ನಡೆಸಿಲ್ಲ, ಸ್ವಾಧೀನದಲ್ಲಿಯೂ ಇರಲಿಲ್ಲ ಹಾಗೂ ತಪ್ಪು ತಿಳಿವಳಿಕೆಯಿಂದ ಗೇಣಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಲಿಖಿತವಾಗಿ ಒಪ್ಪಿಕೊಂಡು, ಅರ್ಜಿಗಳನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಿದ್ದರು.

ಲಭ್ಯ ದಾಖಲೆಗಳು, ಕ್ವಿಟ್ ರೆಂಟ್ ವಹಿಗಳು ಹಾಗೂ ಮೈಸೂರು(ವೈಯಕ್ತಿಕ ಮತ್ತು ಇತರೆ) ಇನಾಮುಗಳ ನಿರ್ಮೂಲನಾ ಅಧಿನಿಯಮ, ೧೯೫೪ರ ಕಲಂ ೭(೧)ರ ಅನ್ವಯ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ದಿನಾಂಕ ೨೪-೦೪-೨೦೨೬ರಂದು ಗೇಣಿ ಅರ್ಜಿಗಳನ್ನು ವಜಾಗೊಳಿಸಿ, ಸದರಿ ಜಮೀನುಗಳು ಗೂಳೂರು ಛತ್ರ/ಮುಜಾಫರ್ ಖಾನ ನಿರ್ವಹಣೆಯ ಉದ್ದೇಶಕ್ಕಾಗಿ ಮೀಸಲಿರಿಸಲಾದ ಸಾರ್ವಜನಿಕ ಸ್ವತ್ತಾಗಿವೆ ಎಂದು ಘೋಷಿಸಿ, ಹಕ್ಕು ದಾಖಲೆಗಳಲ್ಲಿ ಸಾರ್ವಜನಿಕ ಆಸ್ತಿಯಾಗಿ ದಾಖಲಿಸುವಂತೆ ತುಮಕೂರು ತಾಲೂಕಿನ ತಹಸೀಲ್ದಾರ್ ಅವರಿಗೆ ಆದೇಶ ನೀಡಿದ್ದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಆದೇಶದಂತೆ ತುಮಕೂರು ತಾಲೂಕಿನ ತಹಸೀಲ್ದಾರ್ ಅವರು ಪಹಣಿ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳು ಹಾಗೂ ಅನುಷ್ಠಾನ ಕ್ರಮಗಳನ್ನು ಕೈಗೊಂಡಿದ್ದಾರೆ. ಇದರೊಂದಿಗೆ 106 ಎಕರೆ 23 ಗುಂಟೆ ಮೌಲ್ಯಯುತ ಸಾರ್ವಜನಿಕ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗುವುದನ್ನು ತಡೆದು ಸರ್ಕಾರದ ಸ್ವಾಧೀನಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ಇದೊಂದು ಮಹತ್ವದ ಮೈಲಿಗಲ್ಲು. ಈ ಹಿಂದೆ ಬಹುಕಾಲ ಈ ಪ್ರಕರಣ ಬಾಕಿಯಿದ್ದುದನ್ನು ಗಮನಿಸಲಾಗಿತ್ತು. ಉಚ್ಛ ನ್ಯಾಯಾಲಯದ ಆದೇಶದಂತೆ ಈ ಹಿಂದೆಯೇ ಬಗೆಹರಿಯಬಹುದಾಗಿದ್ದ ಪ್ರಕರಣವನ್ನು ಇತ್ಯರ್ಥಗೊಳಿಸಿದ ತೃಪ್ತಿ ತಮಗಿದೆ. ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ತುಮಕೂರು ಸುತ್ತಮುತ್ತ ಭೂಮಿಯ ಮೌಲ್ಯವೂ ಹೆಚ್ಚುತ್ತಿದೆ. ಸಾರ್ವಜನಿಕ ಉದ್ದೇಶಗಳಿಗೆ ಭೂಮಿ ಕೊರತೆ ಆಗಬಹುದಾದ ಇಂತಹ ಸಂದರ್ಭದಲ್ಲಿ ಈ ಒಂದು ಅಮೂಲ್ಯ ಮತ್ತು ಐತಿಹಾಸಿಕ ಆದೇಶವನ್ನು ಮಾಡಲಾಗಿದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಸೌಲಭ್ಯ ರೈತರು ಪಡೆಯಲಿ: ಶಾಸಕ ಎಚ್.ಡಿ. ತಮ್ಮಯ್ಯ
ಪ್ರಗತಿ ಹೆಸರಿನಲ್ಲಿ ಭಾರತದ ಉತ್ಕೃಷ್ಟ ಆಧ್ಯಾತ್ಮ ಸಂಸ್ಕೃತಿ ನಾಶಗೊಳ್ಳದಿರಲಿ