ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪ್ರಕೃತಿ ವಿಕೋಪದಿಂದ ಬೆಳೆಹಾನಿಯಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ವಿಮೆ ಮೂಲಕ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಮನವಿ ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ಬೆಳೆವಿಮೆ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ರಾಜ್ಯಾದ್ಯಂತ ಏಕ ಕಾಲದಲ್ಲಿ ಜಿಲ್ಲೆಯಿಂದ ಹೋಬಳಿ ಮಟ್ಟಕ್ಕೆ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಬಗ್ಗೆ ಪ್ರಚಾರದ ಈ ಕಾರ್ಯಕ್ರಮ ಉತ್ತಮವಾಗಿದೆ ಎಂದು ಹೇಳಿದರು.

ಸರ್ಕಾರದ ಸೌಲಭ್ಯಗಳಿಗೆ ಸಂಬಂಧಿಸಿದ ಫಲಾನುಭವಿಗಳಿಗೆ ತಲುಪಬೇಕೆಂಬುದೆ ಇದರ ಉದ್ದೇಶ. ಕೃಷಿ ಇಲಾಖೆ ಯಡಿ ಯೋಜನೆ ಬಗ್ಗೆ ಮಾಹಿತಿ ಇದೆ. ಆದರೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಹಣ ಸರಿಯಾಗಿ ದೊರೆಯುತ್ತಿಲ್ಲ ಎಂಬ ದೂರು ಗಳಿದ್ದು, ಅಧಿಕಾರಿಗಳು ರೈತರ ಮನವೊಲಿಸಿ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.

ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಬೆಳೆ ವಿಮೆ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿದಾಗ ರೈತರು ವಿಮೆ ಮಾಡಿಸುತ್ತಾರೆ. ಜೊತೆಗೆ ಬೆಳೆ ಸಮೀಕ್ಷೆ ಮಾಡುವಾಗ ಇಲಾಖೆ ಮಾನದಂಡ ಗೊಂದಲಗಳಿಗೆ ಕಾರಣ ವಾಗುತ್ತಿದೆ ಎಂದು ವಿಷಾಧಿಸಿದರು.


ಫ್ರೂಟ್ಸ್ ಡಾಟಾದಲ್ಲಿ ತಮ್ಮ ಮಾಹಿತಿಯನ್ನು ರೈತರು ನೋಂದಾಯಿಸುವುದರಿಂದ ಬೆಳೆಗಳಿಗೆ ರಸಗೊಬ್ಬರ ಬಳಕೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಕಾರ್ಯಕ್ರಮವನ್ನು ಗ್ರಾಪಂ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ದೇಶದ ಬೆನ್ನೆಲುಬಾದ ರೈತನ ಬದುಕು ಹಸನಾಗಿಸಲು ಕೇಂದ್ರ- ರಾಜ್ಯ ಸರ್ಕಾರ ಕೃಷಿ ಇಲಾಖೆ ಮೂಲಕ ಹಲ ವಾರು ಯೋಜನೆ ಜಾರಿಗೆ ತಂದಿದೆ. ಬೆಳೆವಿಮೆ, ಬಿತ್ತನೆ ಬೀಜಗಳ ಕೊರತೆಯಾಗದಂತೆ ಹಾಗೂ ರಸಗೊಬ್ಬರ ಅಭಾವ ತಲೆದೋರ ದಂತೆ ಗಮನ ಹರಿಸಿ ಆದ್ಯತೆ ನೀಡಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ರೈತರ ಪಾಲಿನ ವರದಾನ. ಈ ಕಾರ್ಯಕ್ರಮ ಪ್ರಾರಂಭದಲ್ಲಿ ಇದ್ದ ಹತ್ತಾರು ತೊಡಕು ಇತ್ತೀಚೆಗೆ ನಿವಾರಣೆಯಾಗಿದೆ. ಬೆಳೆಗಳಿಗೆ ಆಲಿ ಕಲ್ಲು ಮಳೆ, ಭೂ ಕುಸಿತ ಆದಾಗ ಪ್ರಕೃತಿ ವಿಕೋಪ ಹಾನಿ ತಡೆಗೆ ಈ ಯೋಜನೆ ಉತ್ತಮವಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ವಿವಿಧ ರಾಷ್ಟ್ರೀಕೃತಬ್ಯಾಂಕುಗಳ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅಧಿಕಾರಿಗಳಿ ಆಹ್ವಾನ ನೀಡಿಲ್ಲ. ತೋಟಗಾಕೆ ಬೆಳೆಗಳು ಜಿಲ್ಲೆಯಲ್ಲಿ ಹೆಚ್ಚಿದ್ದು, ರಾಗಿ, ಜೋಳ ಬೆಳೆದವರು ವಿಮೆ ಮಾಡಿಸಲು ಮುಂದಾಗುವುದಿಲ್ಲ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್ ಮಾತನಾಡಿ, ಪ್ರತಿ ವರ್ಷ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿ ಸಿದಂತೆ ರೈತರಿಗೆ ಎದುರಾಗುವ ಸಂದಿಗ್ಧ, ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಿಗೆ ಧಾವಿಸಲು ಬೆಳೆ ವಿಮೆ ಮಾಡಿಸುವುದು ಕಡ್ಡಾಯ ಎಂದರು.

ಜಿಲ್ಲೆಯ ರೈತರು ತಮ್ಮ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ನೀಡಿ ಹೆಚ್ಚಿನ ವಿವರ ಎಫ್ ಐ ಡಿ ಮೂಲಕ ಪಡೆದು ರೈತರು ವಿಮಾ ಕಂತು ಪಾವತಿಸುವಂತೆ ಮನವಿ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಎಚ್.ಎಸ್. ಕೀರ್ತನಾ, ಕೃಷಿ ಅಧಿಕಾರಿ ಸುಜಾತ, ನರೇಂದ್ರ, ಕುಮುದ ಮತ್ತಿತರರು ಉಪಸ್ಥಿತರಿದ್ದರು.

ಫೋಟೋ: 9 ಸಿಕೆಎಂ 1

ಚಿಕ್ಕಮಗಳೂರು ಜಿಪಂ ಆವರಣದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ಬೆಳೆವಿಮೆ ಪ್ರಚಾರ ವಾಹನಕ್ಕೆಶಾಸಕ ಎಚ್‌.ಡಿ.ತಮ್ಮಯ್ಯ, ಎಂಎಲ್‌ಸಿ ಎಸ್‌.ಎಲ್‌.ಭೋಜೇಗೌಡ ಚಾಲನೆ ನೀಡಿದರು.