ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು. ಪ್ರಗತಿಪರ ವಿಚಾರ ಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಆಧ್ಯಾತ್ಮ ಸಂಸ್ಕೃತಿ ನಾಶಗೊಳ್ಳಬಾರದು. ಭಗವಂತನಿತ್ತ ಸಂಪತ್ತು ನಿಜವಾದ ಬಾಳಿನ ಸಂಪತ್ತೆಂಬುದನ್ನು ಯಾರೂ ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ನಗರದ ವೀರಶೈವ ಲಿಂಗಾತಯತ ಸಮುದಾಯ ಭವನ ಆವರಣದಲ್ಲಿ ನಿರ್ಮಿಸಿದ ಶ್ರೀ ಈಶ್ವರ ದೇವಸ್ಥಾನದ ಉದ್ಘಾಟನೆ-ಲಿಂಗ ಪ್ರತಿಷ್ಠಾಪನೆ ಕಳಸಾರೋಹಣ ಅಂಗವಾಗಿ ಗುರುವಾರ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇವರು ಮತ್ತು ಧರ್ಮವನ್ನು ಮರೆಯಬಾರದು. ದೇವರ ಮೇಲಿನ ನಂಬಿಕೆ ಮನುಷ್ಯನ ಬಾಳಿಗೆ ಶಾಶ್ವತ ನಂದಾದೀಪ. ದೇವರು ಎಲ್ಲರಲ್ಲೂ ಇರುವನು. ಆದರೆ ದೇವರಲ್ಲಿ ಎಲ್ಲರೂ ಇಲ್ಲ. ಮಾನವ ಪರಿಪೂರ್ಣದೆಡೆಗೆ ಸಾಗುವುದೇ ನಿಜವಾದ ಧರ್ಮ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗಲಾರದೆಂಬ ಸತ್ಯ ಅರಿತು ಮನುಷ್ಯ ಬಾಳಬೇಕು. ಚಿಕ್ಕಮಗಳೂರು ನಗರದಲ್ಲಿ ತಾಲೂಕು ವೀರಶೈವ ಸಮಾಜದಿಂದ ಶ್ರೀಮತಿ ಮೈತ್ರಾದೇವಿ ಶ್ರೀ ಬಿ.ಎಸ್.ಯಡಿಯೂರಪ್ಪ ವೀರಶೈವ ಲಿಂಗಾಯತ ಭವನ ಸುಂದರ ಭವ್ಯವಾಗಿ ನಿರ್ಮಾಣಗೊಂಡಿರುವುದು ಸಮಾಜ ಬಾಂಧವರ ಸೌಭಾಗ್ಯ ಎಂದರು.


ಕಟ್ಟಡ ನಿರ್ಮಾಣಕ್ಕೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮತ್ತು ಇನ್ನಿತರ ಸಮಾಜದ ಗಣ್ಯ ಬಾಂಧವರ ಸಹಕಾರ ದೊರಕಿರುವುದು ಅವರ ಸಮಾಜಾಭಿಮಾನ, ಧರ್ಮಶ್ರದ್ಧೆ ಕಾರಣವೆಂದರೆ ತಪ್ಪಾಗದು. ಇದಕ್ಕಾಗಿ ಶ್ರಮಿಸಿದ ವೀರಶೈವ ಲಿಂಗಾಯತ ಸಮಾಜ ಬಾಂಧವರಿಗೆ ಹೃದಯಾರೆ ಹಾರೈಸುತ್ತೇವೆ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಪರಿಪಕ್ವ ಸಮಾಜ ನಿರ್ಮಾಣ ಕಾರ್ಯವೇ ನಿಜ ವಾದ ಧರ್ಮ. ಮನುಷ್ಯ ಜೀವನ ಸುಂದರ ಶುದ್ಧಗೊಳಿಸುವುದೇ ಧರ್ಮದ ಗುರಿ. ಚಿಕ್ಕಮಗಳೂರು ನಗರದಲ್ಲಿ ತಾಲೂಕು ವೀರಶೈವ ಸಮಾಜ ಬಾಂಧವರು ಸಂಘಟಿತರಾಗಿ ಮಾಡಿದ ಈ ಕಾರ್ಯ ಇನ್ನುಳಿದ ಪ್ರದೇಶಗಳ ಸಮಾಜ ಬಾಂಧವರಿಗೆ ಸ್ಫೂರ್ತಿ. ತಂದೆ ತಾಯಿ ಹೆಸರಿನಲ್ಲಿ ನಿರ್ಮಾಣಗೊಂಡ ಭವನಕ್ಕೆ ಅಳಿಲು ಸೇವೆ ಸಲ್ಲಿಸಿದ ಪುಣ್ಯ ನನ್ನದು. ಇದಕ್ಕಾಗಿ ಅನೇಕ ಸಮಾಜ ಬಾಂಧವರು ಕೊಟ್ಟ ಸಹಕಾರ ಸ್ಮರಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಚಿಕ್ಕಮಗಳೂರು ನಗರಕ್ಕೊಂದು ಹೊನ್ನ ಕಳಸ ಇಟ್ಟಂತೆ ಭವ್ಯ ಭವನ ನಿರ್ಮಾಣಗೊಂಡಿರುವುದು ಎಲ್ಲರಿಗೂ ಸಂತೋಷ ತಂದಿದೆ. ಸಡಿಲಗೊಳ್ಳುತ್ತಿರುವ ಸಂಬಂಧಗಳನ್ನು ಗಟ್ಟಿಗೊಳಿ ಸುವುದೇ ಧರ್ಮದ ಗುರಿ. ಸಮೃದ್ಧ ಸದೃಢ ನಾಡು ಕಟ್ಟುವ ಶಕ್ತಿ ಸಮಾಜಕ್ಕೆ ಇದೆ ಎಂಬುದಕ್ಕೆ ಇದು ಸಾಕ್ಷಿ. ಶ್ರೀ ರಂಭಾಪುರಿ ಜಗದ್ಗುರುಗಳಿಂದ ಶ್ರೀ ಈಶ್ವರ ದೇವಸ್ಥಾನ ಉದ್ಘಾಟನೆ ಲಿಂಗ ಪ್ರತಿಷ್ಠಾಪನೆ ಕಳಸಾರೋಹಣ ನೆರವೇರಿರುವುದು ಸಕಲ ರಲ್ಲಿರುವ ಧರ್ಮನಿಷ್ಠೆಗೆ ಕಾರಣ ಎಂದರೆ ತಪ್ಪಾಗದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮತ್ತು ಶಿವ ದೇವಾಲಯದ ದಾನಿಗಳಾದ ಶ್ರೀಮತಿ ಸಂಗೀತ ಮತ್ತು ಎಸ್.ಬಿ.ತಿಪ್ಪಾರೆಡ್ಡಿ ಕುಟುಂಬದವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಬಿ.ಎ.ಶಿವಶಂಕರ್ ಮಾತನಾಡಿ, ನಗರದ ಚಾರಿತ್ರಿಕ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಸಮಾರಂಭ. ಶ್ರೀ ರಂಭಾ ಪುರಿ ಜಗದ್ಗುರುಗಳನ್ನು ಭವ್ಯ ಭವನದ ಉದ್ಘಾಟನೆಗೆ ಬರಮಾಡಿಕೊಳ್ಳುವ ಅಪೇಕ್ಷೆ ಇತ್ತು. ಆದರೆ ಜಗದ್ಗುರುಗಳ ಪೂರ್ವ ಭಾವಿ ನಿಗದಿತ ಕಾರ್ಯಕ್ರಮಗಳಿದ್ದ ಕಾರಣ ದಯಮಾಡಿಸಲು ಸಾಧ್ಯವಾಗಲಿಲ್ಲ. ಇಂದು ಸಭಾ ಭವನದ ಆವರಣದಲ್ಲಿ ಶ್ರೀ ಈಶ್ವರ ದೇವಸ್ಥಾನ ನಿರ್ಮಿಸಿ ಲಿಂಗ ಪ್ರತಿಷ್ಠಾಪನೆ ಕಳಸಾರೋಹಣಕ್ಕಾಗಿ ಅವರು ಆಗಮಿಸಿರುವುದು ಸಕಲ ಸದ್ಭಕ್ತರ ಸೌಭಾಗ್ಯ ಎಂದು ಭಾವಿಸುತ್ತೇನೆ. ಭವನ ಹಾಗೂ ದೇವಸ್ಥಾನ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸಿದ ಎಲ್ಲ ಸದ್ಭಕ್ತರ ಸಹಕಾರ ವೀರಶೈವ ಸಮಾಜ ಎಂದೂ ಮರೆಯುವುದಿಲ್ಲ ಎಂದರು.

ಹುಲಿಕೆರೆ ವಿರೂಪಾಕ್ಷ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಬೇರುಗಂಡಿ ಮಠದ ರೇಣುಕ ಮಹಾಂತ ಶಿವಾ ಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ತರೀಕೆರೆ ಜಗದೀಶ ಶಿವಾಚಾರ್ಯರು, ಲಕ್ಷ್ಮೀಪುರದ ಜಯಬಸವಾನಂದ ಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಮುಖರಾದ ಎಚ್.ಎನ್.ನಂಜೇಗೌಡ, ಸಿ.ಬಿ.ನಂದೀಶ, ಡಿ.ಎಸ್.ಮಮತ, ಎಸ್.ದೇವರಾಜ್, ಯು.ಎಂ.ಬಸವರಾಜ್, ಎಂ.ವಿ.ಷಡಾಕ್ಷರಿ, ಬಿ.ನಿ.ವಿಶ್ವನಾಥ, ಸಿ.ಕೆ.ಪ್ರಸಾದ್ ಸಿರಿಮನೆ, ಯು.ಎಸ್.ತೇಜೇಶ್‌ಕುಮಾರ್, ಎಚ್.ಸಿ.ಚಂದ್ರಮೌಳಿ ಸೇರಿದಂತೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಎಂ.ಎಸ್.ನಿರಂಜನ್ ಸರ್ವರನ್ನು ಸ್ವಾಗತಿಸಿದರು. ಎಂ.ಸಿ.ಶಿವಾನಂದಸ್ವಾಮಿ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.ಫೋಟೋ: 9 ಸಿಕೆಎಂ 1

ಚಿಕ್ಕಮಗಳೂರಿನ ವೀರಶೈವ ಲಿಂಗಾತಯತ ಸಮುದಾಯ ಭವನದ ಆವರಣದಲ್ಲಿ ನಿರ್ಮಿಸಿದ ಶ್ರೀ ಈಶ್ವರ ದೇವಸ್ಥಾನದ ಉದ್ಘಾಟನೆ-ಲಿಂಗ ಪ್ರತಿಷ್ಠಾಪನೆ ಕಳಸಾರೋಹಣ ಅಂಗವಾಗಿ ಗುರುವಾರ ಜರುಗಿದ ಧರ್ಮ ಜಾಗೃತಿ ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಬಾಳೆಹೊನ್ನೂರು ಶ್ರೀ ರಂಭಾಪಯರಿ ಜಗದ್ಗುರುಗಳು ಸೇರಿದಂತೆ ವಿವಿಧ ಮಠಾಧೀಶರು, ಶಾಸಕ ಎಚ್.ಡಿ.ತಮ್ಮಯ್ಯ ಉಪಸ್ಥಿತರಿದ್ದರು