ಕನ್ನಡಪ್ರಭ ವಾರ್ತೆ, ತುಮಕೂರು

ಬೆಂಗಳೂರಿನಲ್ಲಿ ನಡೆದ 14ನೇ ರಾಜ್ಯ ಮಟ್ಟದ ರೈಫಲ್ ಶೂಟಿಂಗ್ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲೆಯ ಕ್ರೀಡಾಪಟುಗಳಿಗೆ 19 ಪದಕಗಳು ಲಭಿಸಿವೆ. ಬೆಂಗಳೂರು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಶೂಟಿಂಗ್ ರೇಂಜ್ ನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ತುಮಕೂರಿನ ಶೂಟರ್‌ಗಳು 9 ಚಿನ್ನದ ಪದಕ, 9 ಬೆಳ್ಳಿಪದಕ, 1 ಕಂಚಿನ ಪದಕ ಸೇರಿದಂತೆ 19 ಪದಕಗಳನ್ನು ಪಡೆದು ತುಮಕೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧೆಡೆಗಳಿಂದ 800 ಶೂಟರ್‌ಗಳು ಭಾಗವಹಿಸಿದ್ದು, ವಿವೇಕಾನಂದ ಶೂಟಿಂಗ್ ಸಂಸ್ಥೆಯಿಂದ 30 ಜನ ಶೂಟರ್ಸ್ ಭಾಗವಹಿಸಿದ್ದರು. ವನಿತಾ 15 ವರ್ಷದ ಬಾಲಕಿ ದಾಖಲೆಯ ಮೊತ್ತ 336 ಅಂಕಗಳನ್ನು ಗಳಿಸಿ ಇಡೀ ರಾಜ್ಯಕ್ಕೆ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಎಲ್ಲಾ ವಿಭಾಗದಲ್ಲೂ ಮೊದಲ ಸ್ಥಾನ ಗಳಿಸಿದ್ದಾರೆ. ಪ್ಯಾರಾಶೂಟರ್ ಹರ್ಷ ಎರಡು ಚಿನ್ನದ ಪದಕವನ್ನು ಗಳಿಸಿದ್ದಾರೆ.

ಸಮರ್ ಶಾನ್ಬೋಗ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕಗಳನ್ನು ಗಳಿಸಿದ್ದಾರೆ, ವಿಶ್ರುತ, ಅಮೃತ ಹಾಗೂ ಪ್ರಿಯಾ ಗುಂಪು ವಿಭಾಗಗಳಲ್ಲಿ ಪದಕಗಳನ್ನು ಗಳಿಸಿರುತ್ತಾರೆ. 22 ಶೂಟರ್ ಗಳು ದಕ್ಷಿಣ ವಲಯದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ತುಮಕೂರಿಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಶೂಟಿಂಗ್‌ನಲ್ಲಿ ಪದಕ ವಿಜೇತರನ್ನು ಅಭಿನಂದಿಸಿದರು.