ನಿಷ್ಪಕ್ಷಪಾತ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ

KannadaprabhaNewsNetwork | Published : Apr 14, 2024 1:49 AM

ಸಾರಾಂಶ

ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿ ತಪ್ಪದೇ ಪಾಲಿಸಬೇಕು. ಆರ್‌ಒ, ಎಆರ್‌ಒ ಮತ್ತು ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ಚುನಾವಣಾ ಆಯೋಗ ಶಾಸನಬದ್ಧ ಅಧಿಕಾರ ಮತ್ತು ಜವಾಬ್ದಾರಿ ನೀಡಿದೆ.

ಧಾರವಾಡ:

ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿಆರ್‌ಒ) ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ (ಎಪಿಆರ್‌ಒ)ಗಳು ನಿಷ್ಪಕ್ಷಪಾತ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಚುನಾವಣೆಯನ್ನು ಸೂಸುತ್ರವಾಗಿ ನಡೆಸಲು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.ಇಲ್ಲಿಯ ವಿದ್ಯಾಗಿರಿಯ ಜೆಎಸ್ಸೆಸ್‌ ಕಾಲೇಜು ಆವರಣದಲ್ಲಿ ಧಾರವಾಡ ಲೋಕಸಭಾ ಚುನಾವಣೆಯ ಮತಗಟ್ಟೆಗಳಿಗೆ ನೇಮಕವಾಗಿರುವ ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಶನಿವಾರ ಆಯೋಜಿಸಿದ್ದ ಮೊದಲ ತರಬೇತಿಯಲ್ಲಿ ಮಾತನಾಡಿದ ಅವರು, ಮತದಾನ ನಡೆಯುವ ವೇಳೆ ಮತದಾರರಿಗೆ ಯಾವುದೇ ಅಡತಡೆಯಾಗದಂತೆ ಪೂರ್ವಭಾವಿಯಾಗಿ ಎರಡು ಹಂತದ ತರಬೇತಿ ನೀಡಲಾಗುತ್ತಿದೆ. ಅಧಿಕಾರಿಗಳಿಗೆ ಮತಯಂತ್ರಗಳ ಮಾದರಿ, ಬಳಕೆ ಮಾಡುವ ವಿಧಾನ ಕುರಿತು ನುರಿತ ತಜ್ಞರು ತರಬೇತಿ ನೀಡುತ್ತಾರೆ ಎಂದರು.

ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿ ತಪ್ಪದೇ ಪಾಲಿಸಬೇಕು. ಆರ್‌ಒ, ಎಆರ್‌ಒ ಮತ್ತು ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ಚುನಾವಣಾ ಆಯೋಗ ಶಾಸನಬದ್ಧ ಅಧಿಕಾರ ಮತ್ತು ಜವಾಬ್ದಾರಿ ನೀಡಿದೆ. ಅದನ್ನು ಸರಿಯಾಗಿ ನಿರ್ವಹಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ತಾಂತ್ರಿಕ ಅಥವಾ ಬೇರೆ ರೀತಿಯ ಗೊಂದಲ, ಸಮಸ್ಯೆ ಉಂಟಾದಲ್ಲಿ ಹೆದರುವ ಅಗತ್ಯವಿಲ್ಲ. ಎಲ್ಲದಕ್ಕೂ ಚುನಾವಣಾ ಆಯೋಗದಿಂದ ಪ್ರೊಟೊಕಾಲ್ ಇದೆ. ಅದನ್ನು ಪಾಲಿಸಬೇಕು. ಸೆಕ್ಟರ್ ಆಫೀಸರ್‌, ಹಿರಿಯ ಅಧಿಕಾರಿಗಳ ಸಲಹೆ ಪಡೆದು, ಚುನಾವಣಾ ನಿಯಮಗಳ ಅನುಸಾರ ಕೆಲಸ ಮಾಡಬೇಕೆಂದು ಸೂಚಿಸಿದರು.

ಮತಯಂತ್ರಗಳು ಜೋಪಾನ:

ಮತದಾನ ದಿನದಂದು ಬಳಕೆ ಮಾಡಲು ಪೂರೈಸುವ ಇವ್ಹಿಎಂ ಮತ್ತು ವಿವಿ ಪ್ಯಾಟ್ ಮಶಿನ್‌ಗಳನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ತರಬೇತಿ ದಿನಗಳಂದು ನೀಡುವ ಪ್ರಾಯೋಗಿಕ ತರಬೇತಿಯಲ್ಲಿ ಮಶಿನ್‌ಗಳ ನಿರ್ವಹಣೆ ಕುರಿತು ಸರಿಯಾಗಿ ತಿಳಿದುಯಬೇಕು. ಮತದಾನ ದಿನದಂದು ಆಕಸ್ಮಿಕವಾಗಿ ತಾಂತ್ರಿಕ ತೊಂದರೆ ಉಂಟಾದಲ್ಲಿ ತಮ್ಮ ಸೆಕ್ಟರ್ ಅಧಿಕಾರಿಗೆ ಕರೆ ಮಾಡಿ, ತಕ್ಷಣ ತಿಳಿಸಬೇಕು ಮತ್ತು ಅವರ ನೆರವಿನಲ್ಲಿ ಸರಿಪಡಿಸಿಕೊಳ್ಳಬೇಕು ಎಂದರು.

ಪಿಆರ್‌ಒಗಳಿಗೆ ಮಾಸ್ಟ್ರಿಂಗ್‌ ಮತ್ತು ಡಿಮಾಸ್ಟ್ರಿಂಗ್‌ ಸುಲಭವಾಗಿ ಮಾಡಿಕೊಡಲು ಅಗತ್ಯ, ನುರಿತ ಸಿಬ್ಬಂದಿ ನೇಮಿಸಲಾಗುವುದು. ವ್ಯವಸ್ಥಿವಾಗಿ ನಿರ್ವಹಿಸಲು ಸೆಕ್ಟರ್ ಆಫೀಸರ್‌ಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ನುರಿತ ಸಿಬ್ಬಂದಿ ನೇಮಿಸಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಸಹಾಯಕ ಚುನಾವಣಾಧಿಕಾರಿಗಳಾದ ಪ್ರಿಯಾಂಗಾ ಎಂ., ಶಾಲಂ ಹುಸೇನ್, ನೋಡಲ್ ಅಧಿಕಾರಿ ಅಜೀಜ್ ದೇಸಾಯಿ, ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ಪಾಲಿಕೆ ವಲಯ ಅಧಿಕಾರಿ ಶಂಕರಗೌಡ ಪಾಟೀಲ, ಚುನಾವಣಾ ವಿಭಾಗದ ಅಧಿಕಾರಿ ಉಮೇಶ ಸವಣೂರ ಇದ್ದರು.

ಏಳು ಸ್ಥಳಗಳಲ್ಲಿ ಯಶಸ್ವಿ ತರಬೇತಿ ಕಾರ್ಯಾಗಾರ

ಧಾರವಾಡ ಲೋಕಸಭಾ ಚುನಾವಣೆಗೆ ಮೇ 7ರಂದು ಮತದಾನ ಜರುಗಲಿದ್ದು, ಅಂದು ಜಿಲ್ಲೆಯ 1660 ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು ಒಟ್ಟು 4477 ಜನ ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಜಿಲ್ಲೆಯ 7 ಸ್ಥಳಗಳಲ್ಲಿ ಶನಿವಾರ ಯಶಸ್ವಿಯಾಗಿ ಮೊದಲ ಹಂತದ ತರಬೇತಿ ನೀಡಲಾಯಿತು. ಜಿಲ್ಲೆಯ ತರಬೇತಿ ಸ್ಥಳಗಳಿಗೆ ಸ್ವತಃ ಭೇಟಿ ನೀಡಿ, ತರಬೇತಿಗೆ ಆಗಮಿಸಿದ್ದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಚುನಾವಣಾ ಕರ್ತವ್ಯ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಸಂವಾದ ಮಾಡಿದರು.

ನವಲಗುಂದ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ದೇವರಾಜ್ ಆರ್. ನೇತೃತ್ವದಲ್ಲಿ ಶಂಕರ ಕಾಲೇಜಿನಲ್ಲಿ, ಕುಂದಗೋಳ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ರುದ್ರೇಶ ಗಾಳಿ ನೇತೃತ್ವದಲ್ಲಿ ಹರಭಟ್ಟ ಪಿಯು ಕಾಲೇಜಿನಲ್ಲಿ, ಧಾರವಾಡ ಹಾಗೂ ಹು-ಧಾ ಪಶ್ಚಿಮ ಮತಕ್ಷೇತ್ರದ ಶಾಲಂ ಹುಸೇನ್ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ನೇತೃತ್ವದಲ್ಲಿ ವಿದ್ಯಾಗಿರಿಯ ಜೆಎಸ್ಸೆಸ್ ಕಾಲೇಜಿನಲ್ಲಿ, ಹು–ಧಾ ಪೂರ್ವ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ವಿನೋದ ಹೆಗ್ಗಳಗಿ ನೇತೃತ್ವದಲ್ಲಿ ತರಬೇತಿಯನ್ನು ವಿದ್ಯಾನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ಹು-ಧಾ ಕೇಂದ್ರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ನೇತೃತ್ವದಲ್ಲಿ ತರಬೇತಿಯನ್ನು ಲ್ಯಾಮಿಂಗ್‌ಟನ್ ಶಾಲೆಯಲ್ಲಿ, ಕಲಘಟಗಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸಿದ್ದು ಹುಳ್ಳೊಳ್ಳಿ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನೀಡಲಾಯಿತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Share this article