ನಿರ್ಲಕ್ಷ್ಯತನ ತೋರದೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ: ಡಿಸಿ ನಲಿನ್ ಅತುಲ್

KannadaprabhaNewsNetwork | Published : May 28, 2024 1:00 AM

ಸಾರಾಂಶ

ಜವಾಬ್ದಾರಿಯಿಂದ ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಕರ್ತವ್ಯ ನಿರ್ವಹಿಸಬೇಕು

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ 2ನೇ ಹಂತದ ತರಬೇತಿ..ಕನ್ನಡಪ್ರಭ ವಾರ್ತೆ ಕೊಪ್ಪಳ

ಚುನಾವಣಾ ಮತದಾನ ದಿನದಂದು ನಿಯೋಜಿತ ಸಿಬ್ಬಂದಿ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ಜವಾಬ್ದಾರಿಯಿಂದ ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಚುನಾವಣಾ ನಿಯೋಜಿತ ಸಿಬ್ಬಂದಿಗೆ ಸೂಚಿಸಿದರು.

ಸೋಮವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ-2024ರ ಸಂಬಂಧ ಜಿಲ್ಲೆಯ ಎಲ್ಲ ಪಿಆರ್‌ಒ ಹಾಗೂ ಎಪಿಆರ್‌ಒಗಳಿಗೆ ಆಯೋಜಿಸಿದ್ದ 2ನೇ ಹಂತದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪಿಆರ್‌ಒ ಮತ್ತು ಎಪಿಆರ್‌ಒಗಳು ಮತದಾನದ ದಿನದಂದು ನಿಗದಿತ ಸಮಯಕ್ಕೆ ನಿಯೋಜಿತ ಮತಗಟ್ಟೆಗೆ ಹಾಜರಾಗಬೇಕು. ಯಾವುದೇ ರೀತಿಯ ನಿರ್ಲಕ್ಷ್ಯತನ ತೋರದೆ ಚುನಾವಣಾ ಆಯೋಗ ನೀಡಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒತ್ತಡಮುಕ್ತವಾಗಿ ಹಾಗೂ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿಬ್ಬಂದಿಗೆ ತಿಳಿಸಿದರು.

ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ವಿದ್ಯಾಧರ ಮೇಘರಾಜ ಮಾತನಾಡಿ, ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯು ಜೂ. 3ರಂದು ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 24 ಮತಗಟ್ಟೆ ಸ್ಥಾಪಿಸಲಾಗಿದ್ದು, ಎಲ್ಲ ಮತಗಟ್ಟೆಗಳ ಪಿಆರ್‌ಒ ಮತ್ತು ಎಪಿಆರ್‌ಒಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎಂದು ತರಬೇತಿ ನೀಡಿದರು. ಮತಗಟ್ಟೆ ಅಧಿಕಾರಿಗಳು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತದಾನ ನಡೆಸಲು ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು.

ಮಸ್ಟರಿಂಗ್ ಕಾರ್ಯಗಳಲ್ಲಿ ತಿಳಿಸಿದ ಸಮಯ ಮತ್ತು ಸ್ಥಳದಲ್ಲಿ ಸೇರಬೇಕು. ಮತಪೆಟ್ಟಿಗೆಗಳು, ಮತಪತ್ರಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸುತ್ತಾ ಇನ್ನಿತರ ಮತದಾನಕ್ಕೆ ಬೇಕಾಗುವಂತ ಸಾಮಗ್ರಿಗಳ ಬಗ್ಗೆ ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಮಾಹಿತಿ ನೀಡಿದರು. ಮತಗಟ್ಟೆ ತಲುಪಿದ ನಂತರ ನಿರ್ವಹಿಸಬೇಕಾದ ಕಾರ್ಯದ ಬಗ್ಗೆ ತಿಳಿಸಿದರು. ಏಜೆಂಟ್ ಅಥವಾ ಪ್ರತಿನಿಧಿಗಳ ನೇಮಕ ಪ್ರಕ್ರಿಯೆ ಬಗ್ಗೆ ತಿಳಿಸಿದರು. ಮತಗಟ್ಟೆ ವ್ಯವಸ್ಥೆ, ಮತಪತ್ರ ನಿರ್ವಹಣೆ ಹಾಗೂ ಗ್ರೀನ್ ಪೇಪರ್ ಸೀಲ್ ಅಳವಡಿಕೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲಾ, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ, ಚುನಾವಣಾ ತಹಸೀಲ್ದಾರ ರವಿಕುಮಾರ್ ವಸ್ತ್ರದ್ ಸೇರಿದಂತೆ ಜಿಲ್ಲೆಯ ಎಲ್ಲ ಪಿಆರ್‌ಒ ಮತ್ತು ಎಪಿಆರ್‌ಒಗಳು ಉಪಸ್ಥಿತರಿದ್ದರು.

Share this article