ಶಿಗ್ಗಾಂವಿ: ಶಿಗ್ಗಾಂವಿ- ಸವಣೂರು ಮತಕ್ಷೇತ್ರದ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಹಕ್ಕುಪತ್ರವಿಲ್ಲದೆ ವಾಸವಿರುವ ಕುಟುಂಬಗಳನ್ನು ಗುರುತಿಸಿ ವರದಿ ನೀಡುವಂತೆ ಸೂಚಿಸಿದ್ದರೂ ಅಧಿಕಾರಿಗಳು ಮುಂದಾಗುತ್ತಿಲ್ಲ. ಎರಡು ದಿನಗಳಲ್ಲಿ ವರದಿ ನೀಡದಿದ್ದರೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಯಾಸೀರಖಾನ್ ಪಠಾಣ ಪಿಡಿಒ ಮತ್ತು ಲೆಕ್ಕಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ಅಂಬೇಡ್ಕರ್ ಸಂಕೀರ್ಣದ ಆಡಳಿತ ಭವನದಲ್ಲಿ ನಡೆದ ಪಿಡಿಒ, ಗ್ರಾಮಲೆಕ್ಕಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ದಶಕಗಳಿಂದ ವಾಸವಾದ ಅನಧಿಕೃತ ಕುಟುಂಬಕ್ಕೆ ಹಕ್ಕುಪತ್ರಗಳನ್ನು ವಿತರಿಸುವ ಕನಸು ಕಂಡು ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.ಸಾಕಷ್ಟು ಸಮಯ ಕೊಟ್ಟರೂ ಕನಿಷ್ಠ ನಿಮ್ಮ ಗ್ರಾಪಂ ವ್ಯಾಪ್ತಿಯ ಅನಧಿಕೃತ ಕುಟುಂಬಗಳನ್ನು ಗುರುತಿಸಿ ವರದಿ ನೀಡಲು ನಿಮ್ಮಿಂದಾಗುತ್ತಿಲ್ಲ. ಕೆಲಸ ಮಾಡುವ ಮನಸ್ಸಿದ್ದರೆ ನಿರ್ವಹಿಸಿ. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ. ವರದಿ ಇಲ್ಲದೆ ಬರಿಗೈಯಲ್ಲಿ ಮದುವೆಗೆ ಬಂದಂತೆ ಸಭೆಗೆ ಬಂದಿದ್ದಿರಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಸುಮಾರು ವರ್ಷಗಳಿಂದ ವಾಸವಾದರೂ ಬ್ಯಾಂಕ್ ಸಾಲ ಸೌಲಭ್ಯ ಸಿಗದೇ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ಬಿ ಖಾತಾದಿಂದ ಅವರಿಗೆ ಅನ್ಯಾಯವಾಗುತ್ತದೆ. ೫೦ಕ್ಕೂ ಹೆಚ್ಚು ಕುಟುಂಬಗಳಿದ್ದರೇ ಉಪಗ್ರಾಮ, ಅದಕ್ಕಿಂತ ಹೆಚ್ಚಿದ್ದರೆ ಕಂದಾಯ ಗ್ರಾಮವನ್ನಾಗಿಸಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡರೂ ಅಧಿಕಾರಿಗಳು ನಮ್ಮ ವೇಗಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿಗೆ ಕಂದಾಯ ಸಚಿವರನ್ನು ಆಹ್ವಾನಿಸಿ ಅವರಿಂದ ಹಕ್ಕುಪತ್ರ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಕಂದಾಯ, ಪಂಚಾಯತ್ ರಾಜ್ ಇಲಾಖೆ, ವೇಗದಲ್ಲಿ ಕೆಲಸ ಮಾಡಿ ನಿಗದಿತ ವೇಳೆಗೆ ಬಂಕಾಪುರ, ಶಿಗ್ಗಾಂವಿ, ಸವಣೂರು ಪಟ್ಟಣಗಳು ಸೇರಿದಂತೆ ಕ್ಷೇತ್ರದಲ್ಲಿ ಸರ್ವೇ ಮಾಡಿ ವಾಸವಾದ ಅನಧಿಕೃತ ಕುಟುಂಬಗಳ ವರದಿ ನೀಡಬೇಕು. ಸಲಹೆ, ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸದೇ ಮೈಗಳ್ಳತನ ಮಾಡುವ ಅಧಿಕಾರಿಗಳ ಹೆಸರು ಕೊಡಿ ಎಂದು ತಹಸೀಲ್ದಾರರಿಗೆ ಸೂಚಿಸಿದರು.ಸಭೆಯಲ್ಲಿ ತಹಸಿಲ್ದಾರ್ ರವಿಕುಮಾರ ಕೊರವರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶೇಖಪ್ಪ ಮಣಕಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಸಾಳೊಂಕಿ ಇತರರು ಇದ್ದರು. ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ