ಹಾವೇರಿ: ಸರ್ಕಾರಿ, ಅರಣ್ಯ ಹಾಗೂ ಖಾಸಗಿ ಪ್ರದೇಶಗಳಲ್ಲಿ ವಾಸಿಸುವ ಹಾಡಿ, ಹಟ್ಟಿ ತಾಂಡಾಗಳ ನಿವಾಸಿಗಳ ಜಾಗೆಯನ್ನು ಸಕ್ರಮಗೊಳಿಸಿ ಎಲ್ಲ ತಾಂಡಾ ವಾಸಿಗಳಿಗೆ ಪಟ್ಟಾ ನೀಡಲಾಗುವುದು. ಎಲ್ಲಾ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನು ಮಾಡಲಾಗುವುದು. ಮೊದಲ ಹಂತದಲ್ಲಿ ಜಿಲ್ಲೆಯ ಚಿಕ್ಕಮಳ್ಳಳ್ಳಿ ತಾಂಡಾವನ್ನು ಕಂದಾಯ ಗ್ರಾಮಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶಾಸಕರು ಹಾಗೂ ವಿಧಾನಸಭಾ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಉದ್ಯೋಗ ಹುಡುಕಿ ವಲಸೆ ಹೋಗುವ ಬಂಜಾರ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಸೂರಗೊಂಡನಕೊಪ್ಪದಲ್ಲಿ ಬಂಜಾರ ವಸತಿ ಶಾಲೆ ನಿರ್ಮಾಣಕ್ಕಾಗಿ ರು.೪೨ ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಬಂಜಾರ ಭವನ ನಿರ್ಮಾಣ ಮಾಡಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಬಂಜಾರ ಭವನ ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ತಾಂಡಾಗಳಲ್ಲಿ ಬಂಜಾರ ಭವನ ಬೇಡಿಕೆ ಸಲ್ಲಿಸಿದರೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.
ಲಂಬಾಣಿ ಭಾಷೆಗೆ ಲಿಪಿ ತಯಾರಿಸುವ ನಿಟ್ಟಿನಲ್ಲಿ ಈಗಾಗಲೇ ಸಂಶೋಧಕರಾದ ಭಾಯಾ ನಾಯಕ್ ಅವರು ಲಂಬಾಣಿ ಭಾಷೆಯ ಎರಡು ನಿಘಂಟುಗಳನ್ನು ತಯಾರಿಸಿದ್ದಾರೆ. ಪ್ರಾಧ್ಯಾಪಕ ಡಾ. ಸಣ್ಣರಾಮ ಅವರು ಲಂಬಾಣಿ ಭಾಷೆ ಬೆಳವಣಿಗೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಮುಂದಿನ ಒಂದು ತಿಂಗಳೊಳಗಾಗಿ ಲಂಬಾಣಿ ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.ಸಮಾಜ ಬಾಂಧವರು ಸಂತ ಸೇವಾಲಾಲ್‌ರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ನಾಯಕರು ಸಂಘಟಿತರಾಗಬೇಕು. ಜಯಂತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ. ನಾಗರಾಜ ಮಾತನಾಡಿ, ಲಂಬಾಣಿ ಕಲೆ, ಸಂಸ್ಕೃತಿಗೆ ತನ್ನದೇ ಆದ ಇತಿಹಾಸ ಇದೆ. ಈ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಹೋಗಬೇಕು. ಸರ್ಕಾರಕ್ಕೆ ಶಿಕ್ಷಣಕ್ಕೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಉನ್ನತ ಶಿಕ್ಷಣ ಪಡೆಯುವ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮೊದಲು ನಗರದ ಹುತಾತ್ಮ ಮಹದೇವ ಮೈಲಾರ ವೃತ್ತದಿಂದ ಸಂತ ಶ್ರೀ ಸೇವಾಲಾಲ್ ಭಾವಚಿತ್ರ ಮೆರವಣಿಗೆ ವಿಧಾನಸಭಾ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಚಾಲನೆ ನೀಡಿದರು. ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಗಣೇಶ ಬಿಷ್ಟಣ್ಣನವರ ಇದ್ದರು. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.