ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಕ್ರಮ

KannadaprabhaNewsNetwork |  
Published : Jan 10, 2025, 12:45 AM IST
ಗೂಳೂರು ಹೋಬಳಿ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಕೇಂದ್ರ ಸಚಿವ ಸೋಮಣ್ಣ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಹಲವಾರು ಕೈಗಾರಿಕೆಗಳು ಸ್ಥಾಪನೆಯಾಗಿವೆ, ಗುಬ್ಬಿಯಲ್ಲಿ ಎಚ್‌ಎಲ್‌ಎಲ್ ಆರಂಭಗೊಂಡಿದೆ. ಈ ಕೈಗಾರಿಕೆಗಳಲ್ಲಿ ಸ್ಥಳೀಯ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸುವಂತಹ ಕಾರ್ಯಕ್ರಮ ರೂಪಿಸುವ ಕುರಿತು ಶಾಸಕರೊಂದಿಗೆ ಸಮಾಲೋಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ಹಲವಾರು ಕೈಗಾರಿಕೆಗಳು ಸ್ಥಾಪನೆಯಾಗಿವೆ, ಗುಬ್ಬಿಯಲ್ಲಿ ಎಚ್‌ಎಲ್‌ಎಲ್ ಆರಂಭಗೊಂಡಿದೆ. ಈ ಕೈಗಾರಿಕೆಗಳಲ್ಲಿ ಸ್ಥಳೀಯ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸುವಂತಹ ಕಾರ್ಯಕ್ರಮ ರೂಪಿಸುವ ಕುರಿತು ಶಾಸಕರೊಂದಿಗೆ ಸಮಾಲೋಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಜ್ಯ ಸಚಿವ ವಿ.ಸೋಮಣ್ಣ ಹೇಳಿದರು.ತುಮಕೂರು ತಾಲೂಕು ಗೂಳೂರಿನಲ್ಲಿ ಗುರುವಾರ ನಡೆದ ಗೂಳೂರು ಹೋಬಳಿ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.ದೂರದೃಷ್ಟಿ ಚಿಂತನೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಯೋಜನೆಗಳ ಫಲ ಜನರಿಗೆ ತಲುಪಬೇಕು. ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ತಂದು ತುಮಕೂರು ಜಿಲ್ಲೆಯನ್ನು ಮಾದರಿಯನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.ಜಲಜೀವನ್ ಮಿಷನ್ ಯೋಜನೆ ಕಾಮಗಾರಿಯ ಬಗ್ಗೆ ದೂರುಗಳು ಬರುತ್ತಿವೆ. ಪ್ರತಿ ಹಳ್ಳಿಯಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ವಿ.ಸೋಮಣ್ಣ, ಯಾವುದೇ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಇಚ್ಛಾಶಕ್ತಿ ಬೆಳೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಧಾನಿ ಮೋದಿಯವರು ಈ ದೇಶದ ಶಕ್ತಿ, ಅವರ ಆಡಳಿತದ ಕಾರ್ಯವೈಖರಿ, ದೇಶದ ಭವಿಷ್ಯ ರೂಪಿಸುವ ಅವರ ಚಿಂತನೆಗಳು ಯುವ ಜನಾಂಗಕ್ಕೆ ಪ್ರೇರಣೆಯಾಗಿವೆ. ಮುಂದಿನ ಪೀಳಿಗೆಗೆ ಮೋದಿಯವರು ದೊಡ್ಡ ಕೊಡುಗೆ ನೀಡುತ್ತಾರೆ. ದೇಶದ ಭವಿಷ್ಯ ರೂಪಿಸಬೇಕಾದ ಯುವಜನರ ಭವಿಷ್ಯವನ್ನು ಸುಭದ್ರಗೊಳಿಸಲು ಮೋದಿಯವರು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ ಎಂದು ಹೇಳಿದರು.ಶಾಸಕ ಬಿ.ಸುರೇಶ್‌ಗೌಡರು ಸಚಿವ ಸೋಮಣ್ಣ ಅವರ ಕಾರ್ಯವೈಖರಿ, ಅಭಿವೃದ್ಧಿ ಕಾರ್ಯಗಳಲ್ಲಿ ಅವರಿಗಿರುವ ಕಾಳಜಿ ಕೊಂಡಾಡಿ, ಸೋಮಣ್ಣನವರು ಜಿಲ್ಲೆಗೆ ನೀಡಿರುವ ಯೋಜನೆಗಳನ್ನು ವಿವರಿಸಿದರು. ಹೋಬಳಿ ಕೇಂದ್ರವಾದ ಗೂಳೂರಿನಲ್ಲಿ ಪಂಚಾಯ್ತಿ ಕಟ್ಟಡ ಇಲ್ಲದಿರುವ ಕಾರಣ ಕಟ್ಟಡಕ್ಕಾಗಿ 10 ಲಕ್ಷ ರು.ಅನುದಾನ ನೀಡಬೇಕು ಎಂದು ಕೋರಿದರು.ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಹೆಚ್ಚುವರಿ ಎಸ್ಪಿ ಮರಿಯಪ್ಪ, ತಹಸೀಲ್ದಾರ್ ರಾಜೇಶ್ವರಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಹರ್ಷಕುಮಾರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ವೈ.ಎಚ್.ಹುಚ್ಚಯ್ಯ, ಜಿ.ಎಸ್.ಶಿವಕುಮಾರ್, ರಾಮಚಂದ್ರಯ್ಯ, ಗೂಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ನವೀನ್‌ಗೌಡ, ಹೊಳಕಲ್ಲು ಗ್ರಾ.ಪಂ ಅಧ್ಯಕ್ಷ ಎ.ಹೆಚ್.ಅಂಜನಪ್ಪ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಶಂಕರ್ ಸೇರಿದಂತೆ ಗೂಳೂರು ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

PREV

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ