ಕೊಪ್ಪಳ: ಕಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯಬೇಕು ಮತ್ತು ಔಷಧಿಗೆ ಚೀಟಿಯನ್ನು ಬರೆದುಕೊಟ್ಟರೆ ಸಹಿಸುವುದಿಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು, ಬಡವರು ಚಿಕಿತ್ಸೆಗೆ ಬಂದರೆ ಔಷಧಿಯನ್ನು ಹೊರಗಡೆ ತನ್ನಿ ಎಂದು ಚೀಟಿ ಬರೆದುಕೊಡಲಾಗುತ್ತದೆ ಎಂದು ಆರೋಪಿಸಿದರು. ಇದಕ್ಕೆ ಆಕ್ರೋಶಗೊಂಡ ಸಚಿವರು, ಇದಕ್ಕೆ ಅವಕಾಶ ನೀಡಕೂಡದು ಎಂದು ಖಡಕ್ ಸೂಚನೆ ನೀಡಿದರು.
ಕಿಮ್ಸ್ ನಿರ್ದೇಶಕ ವಿಜಯಕುಮಾರ ಇಟಗಿ ಮಾತನಾಡಿ, ಆಸ್ಪತ್ರೆಯಲ್ಲಿ ಎಲ್ಲ ಔಷಧಿಗಳು ಸ್ಟಾಕ್ ಇವೆ. ಯಾವುದೇ ಔಷಧಿ ಬರೆದುಕೊಡುವ ಪ್ರಶ್ನೆಯೇ ಇಲ್ಲ. ಅಷ್ಟಕ್ಕೂ ಇಲ್ಲದೆ ಇರುವ ಔಷಧವನ್ನು ತತ್‌ಕ್ಷಣ ಖರೀದಿ ಮಾಡಿಕೊಡುವುದಕ್ಕೆ ಪ್ರತಿ ನಿತ್ಯ ₹10 ಸಾವಿರ ವೆಚ್ಚ ಮಾಡುವುದಕ್ಕೆ ಸರ್ಕಾರ ಆದೇಶವನ್ನೇ ನೀಡಿದೆ ಎಂದು ಹೇಳಿದರು. ಹಾಗಾದರೂ ಯಾಕೆ ಔಷಧಿಯನ್ನು ಬರೆದುಕೊಡಲಾಗುತ್ತದೆ ಎಂದು ಪ್ರಶ್ನೆ ಮಾಡಿದರು.ಮಧ್ಯೆ ಪ್ರವೇಶ ಮಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರು, ಔಷಧಿಗಾಗಿ ಎಷ್ಟು ಖರ್ಚು ಮಾಡುತ್ತೀರಿ ಎನ್ನುವ ಮಾಹಿತಿ ನೀಡಿ ಎಂದರು. ಪ್ರತಿ ವರ್ಷ ಮೂರೂವರೆ ಕೋಟಿ ರುಪಾಯಿ ವೆಚ್ಚ ಮಾಡುತ್ತೇವೆ ಎಂದಾಗ ಇಷ್ಟಾದರೂ ಯಾಕೆ ಸಮಸ್ಯೆಯಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲ, ಆಸ್ಪತ್ರೆಯ ಸ್ವಚ್ಛತೆ ವಿಷಯದಲ್ಲಿ ಈಗಲೂ ಹಾಗೆ ಇದೆ. ಎಷ್ಟೇ ಕಟ್ಟುನಿಟ್ಟಿನ ಸೂಚನೆಯ ನಡುವೆಯೂ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಆರೋಪಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಸದ್ಯ 12 ಹೋಬಳಿಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಇನ್ನೂ ಎಂಟು ಕಡೆ ಸಮುದಾಯ ಆರೋಗ್ಯ ಕೇಂದ್ರಗಳ ನಿರ್ಮಾಣ ಆಗಬೇಕು. ಅವುಗಳ ಉನ್ನತೀಕರಣಕ್ಕೆ ಮತ್ತು ಜಿಲ್ಲೆಯ ಇಪ್ಪತ್ತು ಹೋಬಳಿಗಳಲ್ಲಿ ಕನಿಷ್ಠ 30 ಬೆಡ್‌ಗಳ ಆಸ್ಪತ್ರೆ ಜತೆಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಇತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ವೇಗವಾಗಿ ಆರೋಗ್ಯ ಸೇವೆಯನ್ನು ನೀಡಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ: ಎಸ್‌ಎಸ್‌ಎಲ್‌ಸಿ ಫಲಿತಾಂಶ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಬೇಸರದ ಸಂಗತಿ. ಈ ವರ್ಷ ಅದಕ್ಕೆ ಅವಕಾಶ ನೀಡದೆ, ಫಲಿತಾಂಶ ಸುಧಾರಣೆಯಾಗುವಂತಾಗಲಿ ಎಂದು ಸೂಚಿಸಿದರು.
ಶಾಸಕ ಜಿ. ಜನಾರ್ದನ ರೆಡ್ಡಿ ಮಾತನಾಡಿ, ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮವು ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿದ್ದು, ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಮತ್ತು ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಭದ್ರತೆಯ ದೃಷ್ಟಿಯಿಂದ ಆನೆಗೊಂದಿಯಲ್ಲಿ ಒಂದು ಪೊಲೀಸ್ ಠಾಣೆ ನಿರ್ಮಾಣದ ಅತ್ಯವಶ್ಯಕತೆಯಿದೆ ಎಂದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಈ ಬಗ್ಗೆ ಗೃಹ ಸಚಿವರಲ್ಲಿ ಪ್ರಸ್ತಾಪಿಸಿ, ಆನೆಗೊಂದಿಗೆ ಪೊಲೀಸ್ ಠಾಣೆ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.