- ಈಗಾಗಲೇ 50 ಶಿಕ್ಷಕರನ್ನು ಶಾಲೆಗಳಿಗೆ ನಿಯೋಜಿಸಲಾಗಿದೆ: ಶಾಸಕ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಒಂದೇ ಬಾರಿಗೆ 1.10 ಲಕ್ಷ ಶಿಕ್ಷಕರನ್ನು ಪಾರದರ್ಶಕವಾಗಿ ನೇಮಕ ಮಾಡಿಕೊಂಡ ರಾಜ್ಯ ಎಂದರೆ ಅದು ಕರ್ನಾಟಕ ರಾಜ್ಯ .ಇದರ ಸಂಪೂರ್ಣ ಶ್ರೇಯಸ್ಸು ಶಿಕ್ಷಣ ಸಚಿವರಾಗಿದ್ದ ದಿವಂಗತ ಗೋವಿಂದೇ ಗೌಡ ಅವರಿಗೆ ಸಲ್ಲಬೇಕು. ರಾಜ್ಯದ ಎಲ್ಲ ಶಿಕ್ಷಕ ಸಮುದಾಯ ಮನೆಗಳಲ್ಲಿ ಅವರ ಭಾವಚಿತ್ರವನ್ನಿಟ್ಟು ಪೂಜಿಸಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ಪಟ್ಟಣದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ತಾಲೂಕು ಘಟಕದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಹಾಗೂ ಗುರು ಭವನದ ನೂತನ ಮಳಿಗೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಕರ ಬಹುದಿನ ಬೇಡಿಕೆಯಾದ ಗುರು ಭವನದ ಮೇಲ್ಜಾವಣೆ ನಿರ್ಮಾಣಕ್ಕೆ ಇ-ಸ್ವತ್ತು ಸಮರ್ಪಕ ದಾಖಲೆಗಳನ್ನು ಒದಗಿಸಿದಲ್ಲಿ ಸರ್ಕಾರದ ಹಂತದಲ್ಲಿ ಅನುದಾನ ಬಿಡುಗಡೆ ಮಾಡಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಶಿಕ್ಷಕರಿಗೆ ಮಾತ್ರವಲ್ಲ ಎಲ್ಲ ಇಲಾಖೆಗಳಿಗೂ ಕೆ.ಎ.ಎ.ಎಂ.ಎಸ್. (ಕಾಮ್ಸ) ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿದ್ದು ಶಿಕ್ಷಕರಿಗೆ ಇದರಲ್ಲಿ ರಿಯಾಯಿತಿ ನೀಡುವ ಬಗ್ಗೆ ಸದನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ನೂತನ ತಾಲೂಕು ಅಧ್ಯಕ್ಷ ಜಿಎಸ್. ತಿಮ್ಮಪ್ಪ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ತಾಲೂಕಿನಲ್ಲಿ ಶಿಕ್ಷಕ ಬಂಧುಗಳು 3 ಬಾರಿ ನಿರ್ದೇಶಕನನ್ನಾಗಿ ಆಯ್ಕೆ ಮಾಡಿ, ಈ ಬಾರಿ ತಾಲೂಕು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಸಂಘದ ಪದಾಧಿಕಾರಿಗಳ ಸಹಕಾರದಿಂದ ತಾನು ಕೇವಲ ಭರವಸೆಗಳನ್ನು ಕೊಡದೇ ಕೆಲಸಗಳನ್ನು ಮಾಡಿ ತೋರಿಸುತ್ತೇನೆ. ಗುರುಭವನದ ಮೇಲ್ಚಾವಣೆ ನಿರ್ಮಾಣಕ್ಕಾಗಿ ಶಾಸಕರ, ಎಲ್ಲ ಶಿಕ್ಷಕರ ಸಹಕಾರ ಪಡೆದು ₹50 ಲಕ್ಷ ಅನುದಾನ ಮಂಜೂರು ಮಾಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು.
ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ಕೆ. ಚಂದ್ರಶೇಖರ ಅವರು ಪ್ರಸ್ತಾವಿಕವಾಗಿ ಸಂಘದ ಸ್ಥಿತಿಗತಿಗಳ ಕುರಿತು ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ ಕೆ. ಸಾವಿತ್ರಿಬಾಯಿ ಪುಲೆ ಸಂಘ ಸೇರಿದಂತೆ ಶಿಕ್ಷಕರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಿದರು.
- - -
ಸಮಾರಂಭವನ್ನು ಹೊನ್ನಾಳಿ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.